ಅಫ್ಘಾನ್ ನಿರಾಶ್ರಿತರಿಗೆ ಇನ್ನೊಂದು ವರ್ಷ ಇರಲು ಅವಕಾಶ ಕಲ್ಪಿಸಿದ ಪಾಕಿಸ್ತಾನ
ಇಸ್ಲಾಮಾಬಾದ್ : ಅಫ್ಘಾನಿಸ್ತಾನದ 1.45 ದಶಲಕ್ಷ ನಿರಾಶ್ರಿತರಿಗೆ ಪಾಕಿಸ್ತಾನದಲ್ಲಿ ಉಳಿದುಕೊಳ್ಳುವ ಹಕ್ಕನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2021ರ ಆಗಸ್ಟ್ ನಲ್ಲಿ ತಾಲಿಬಾನ್ ಸರಕಾರ ಅಧಿಕಾರ ವಶಪಡಿಸಿಕೊಂಡ ನಂತರ ಸುಮಾರು 6 ಲಕ್ಷ ಮಂದಿ ಅಫ್ಘಾನ್‍ನಿಂದ ಪಲಾಯನ ಮಾಡಿದ್ದು ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿರುವುದಾಗಿ ಅಂದಾಜಿಸಲಾಗಿದೆ.
ಭದ್ರತೆಯ ವಿಷಯದಲ್ಲಿ ತಾಲಿಬಾನ್ ಜತೆ ಬಿಕ್ಕಟ್ಟು ಮೂಡಿದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರು ತಕ್ಷಣ ದೇಶದಿಂದ ತೆರಳದಿದ್ದರೆ ಬಂಧಿಸುವುದಾಗಿ ಪಾಕಿಸ್ತಾನ ಸರಕಾರ ಕಳೆದ ವರ್ಷ ಆದೇಶಿಸಿತ್ತು. ಇದೀಗ ದಾಖಲೆ ಪತ್ರ ಹೊಂದಿರುವ ವಲಸಿಗರು ಇನ್ನೂ ಒಂದು ವರ್ಷ ದೇಶದಲ್ಲಿ ಉಳಿಯಬಹುದು ಎಂದು ಸರಕಾರ ಬುಧವಾರ ಹೇಳಿದೆ.
ರಿಜಿಸ್ಟ್ರೇಷನ್ ಕಾರ್ಡ್ ಹೊಂದಿರುವ 1.45 ದಶಲಕ್ಷ ಅಫ್ಘಾನ್ ನಿರಾಶ್ರಿತರಿಗೆ 2025ರ ಜೂನ್‍ವರೆಗೆ ದೇಶದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ನೇತೃತ್ವದ ಸರಕಾರದ ಮೂಲಗಳು ಹೇಳಿವೆ.
ವಲಸಿಗರನ್ನು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಮರಳಿ ಕಳಿಸುವುದರಿಂದ ಅವರು ಕಿರುಕುಳಕ್ಕೆ ಒಳಗಾಗಬಹುದು ಎಂದು ಮಾನವ ಹಕ್ಕುಗಳ ವೀಕ್ಷಕರು ಎಚ್ಚರಿಕೆ ನೀಡಿದ್ದರು. ರಿಜಿಸ್ಟ್ರೇಷನ್ ಕಾರ್ಡ್‍ಗಳ ಅವಧಿ ಕಳೆದ ತಿಂಗಳು ಅಂತ್ಯಗೊಂಡಿತ್ತು. ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ (ಯುಎನ್‍ಎಚ್‍ಸಿಆರ್) ಫಿಲಿಪ್ಪೋ ಗ್ರಾಂಡಿ ಪಾಕಿಸ್ತಾನಕ್ಕೆ ಮೂರು ದಿನಗಳ ಭೇಟಿ ನೀಡಿದ ಮರುದಿನ ಪಾಕ್ ಸರಕಾರದ ಘೋಷಣೆ ಹೊರಬಿದ್ದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಿಪ್ಪೋ ಗ್ರಾಂಡಿ `ಅಕ್ರಮ ವಿದೇಶೀಯರ ವಾಪಸಾತಿ ಯೋಜನೆ'ಯನ್ನು ಅಮಾನತುಗೊಳಿಸಿರುವ ಪಾಕ್ ಸರಕಾರದ ಕ್ರಮವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ.