ಅಫ್ಘಾನ್ ಗಡಿ ಬಳಿಯ ಪ್ರಮುಖ ಗಡಿದಾಟನ್ನು ಮುಚ್ಚಿದ ಪಾಕಿಸ್ತಾನ
ಕಾಬೂಲ್: ಅಫ್ಘಾನಿಸ್ತಾನದೊಂದಿಗಿನ ಪ್ರಮುಖ ವಾಯವ್ಯ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಅನ್ನು ಟ್ರಕ್ ಪ್ರಯಾಣಕ್ಕೆ ಪಾಕಿಸ್ತಾನ ಮುಚ್ಚಿದ್ದು ಅಫ್ಘಾನ್ ವಾಹನ ಚಾಲಕರು ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ತೋರಿಸುವಂತೆ ಸೂಚಿಸಿದ್ದಾರೆ ಎಂದು ಅಫ್ಘಾನ್ನ ತಾಲಿಬಾನ್ ಸರಕಾರ ಶನಿವಾರ ಹೇಳಿದೆ.
ತೋರ್ಖಮ್ ಗಡಿದಾಟು ಮೂಲಕ ಟ್ರಕ್ಗಳು ಪಾಕಿಸ್ತಾನವನ್ನು ಪ್ರವೇಶಿಸಬೇಕಿದ್ದರೆ ಟ್ರಕ್ ಚಾಲಕರು ಪಾಸ್ಪೋರ್ಟ್ ಮತ್ತು ವೀಸಾ ಹೊಂದಿರಬೇಕು ಎಂದು ಪಾಕ್ ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ ಎಂದು ಮಾಹಿತಿ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ನೂರ್ ಮುಹಮ್ಮದ್ ಹನೀಫ್ ಶನಿವಾರ ಹೇಳಿದ್ದಾರೆ. ಇದುವರೆಗೆ ಟ್ರಕ್ ಚಾಲಕರು ಪಾಸ್ಪೋರ್ಟ್ನ ಅಗತ್ಯವಿಲ್ಲದೆ ಗಡಿ ದಾಟಲು ಅವಕಾಶವಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಟ್ರಕ್ ಚಾಲಕರಿಂದಲೂ ಪಾಸ್ಪೋರ್ಟ್ ಮತ್ತು ವೀಸಾ ತೋರಿಸುವಂತೆ ಕೇಳಲಾಗುತ್ತಿದೆ ಎಂದು ಹನೀಫ್ ಹೇಳಿದ್ದಾರೆ.
ಇದೀಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡೂ ಕಡೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಮತ್ತು ಶೀಘ್ರದಲ್ಲೇ ನಿರ್ಧಾರವೊಂದಕ್ಕೆ ಬರುವ ನಿರೀಕ್ಷೆಯಿದೆ ಎಂದು ನಂಗರ್ಹಾರ್ ಪ್ರಾಂತದ ಗವರ್ನರ್ ಅವರ ಕಚೇರಿ ಹೇಳಿಕೆ ನೀಡಿದೆ. ಶನಿವಾರ ತರಕಾರಿ, ಹಣ್ಣು ಮುಂತಾದ ಬೇಗನೆ ಹಾಳಾಗುವ ವಸ್ತುಗಳನ್ನು ಸಾಗಿಸುವ ಹಲವು ಟ್ರಕ್ಗಳು ಗಡಿದಾಟುವಿನ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.