ಪಾಕ್: ಸರಬ್ಜಿತ್ ಸಿಂಗ್ ಕೊಲೆ ಆರೋಪಿಯ ಹತ್ಯೆ
ಇಸ್ಲಮಾಬಾದ್: ಲಾಹೋರ್ ಜೈಲಿನಲ್ಲಿ 2013ರಲ್ಲಿ ಭಾರತದ ಕೈದಿ ಸರಬ್ಜಿತ್ ಸಿಂಗ್‍ನನ್ನು ಕ್ರೂರವಾಗಿ ಸಾಯಿಸಿದ ಪ್ರಕರಣದ ಆರೋಪಿ ಅಮೀರ್ ಸಫ್ರ್ರಾಝ್ ತಂಬಾನನ್ನು ರವಿವಾರ ಗುರುತಿಸಲಾಗದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ ಸಂಚುಕೋರ ಹಫೀಝ್ ಸಯೀದ್ ನಿಕಟವರ್ತಿಯಾಗಿದ್ದ ತಂಬಾನ ಮೇಲೆ ಲಾಹೋರ್ ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ಹಂತಕರು ಗುಂಡಿಕ್ಕಿದ್ದಾರೆ. ತೀವ್ರ ಗಾಯಗೊಂಡಿದ್ದ ತಂಬಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ತಾನ ಪ್ರವೇಶಿಸಿದ್ದ ಪಂಜಾಬ್ ನಿವಾಸಿ ಸರಬ್ಜಿತ್ ಸಿಂಗ್‍ನನ್ನು ಪಾಕ್ ಪೊಲೀಸರು ಬಂಧಿಸಿದ್ದು ಈತ 1990ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ನಡೆದ ಬಾಂಬ್‍ಸ್ಫೋಟದಲ್ಲಿ ಪಾತ್ರ ವಹಿಸಿದ್ದ ಎಂಬ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ. ಲಾಹೋರ್ ನ ಕೋಟ್ ಲಖ್‍ಪತ್ ಜೈಲಿನಲ್ಲಿದ್ದ ಸಿಂಗ್ ಮೇಲೆ ಸಹಕೈದಿಗಳು ಇಟ್ಟಿಗೆ ಮತ್ತು ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದ ಸಿಂಗ್ 2013ರ ಮೇ 2ರಂದು ಲಾಹೋರ್ ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ ಹಲ್ಲೆ ಆರೋಪದಿಂದ ಅಮೀರ್ ಸಫ್ರ್ರಾಝ್ ತಂಬಾನನ್ನು ಖುಲಾಸೆಗೊಳಿಸಲಾಗಿತ್ತು.