ಇರಾನ್‍ನಿಂದ ರಾಯಭಾರಿ ಹಿಂದಕ್ಕೆ ಕರೆಸಿಕೊಳ್ಳಲು ಪಾಕ್ ನಿರ್ಧಾರ
Update: 2024-01-17 16:30 GMT
ಇಸ್ಲಮಾಬಾದ್: ತನ್ನ ವಾಯುನೆಲೆಯನ್ನು ಉಲ್ಲಂಘಿಸಿ ಇರಾನ್ ನಡೆಸಿರುವ ದಾಳಿಯು ಕಾನೂನು ಬಾಹಿರ ಕೃತ್ಯವಾಗಿದೆ ಎಂದು ಪಾಕಿಸ್ತಾನ ಖಂಡಿಸಿದ್ದು ಇರಾನ್‍ನಲ್ಲಿರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಿಸಿದೆ.
ಈ ಕಾನೂನುಬಾಹಿರ ಕೃತ್ಯಕ್ಕೆ ಪ್ರತಿಕ್ರಿಯಿಸುವ ಎಲ್ಲಾ ಹಕ್ಕುಗಳನ್ನೂ ಪಾಕ್ ಕಾಯ್ದಿರಿಸಿಕೊಂಡಿದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ವಿಚಾರವನ್ನು ಪಾಕ್ ಸಹಿಸುವುದಿಲ್ಲ ಮತ್ತು ಇದನ್ನು ಒಪ್ಪಲಾಗದು. ಗಂಭೀರ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಸಂದೇಶವನ್ನು ಇರಾನ್ ಸರಕಾರಕ್ಕೆ ತಲುಪಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ಜತೆಗೆ, ಈಗ ವಿದೇಶದಲ್ಲಿರುವ ಪಾಕಿಸ್ತಾನಕ್ಕೆ ಇರಾನ್ ರಾಯಭಾರಿಗೆ ತಾತ್ಕಾಲಿಕವಾಗಿ ಹಿಂದಿರುಗದಂತೆ ಸೂಚಿಸಲಾಗಿದೆ.
ಈಗ ಇರಾನ್ ಜತೆಗೆ ನಡೆಯುತ್ತಿರುವ ಮತ್ತು ಮುಂಬರುವ ಎಲ್ಲಾ ಉನ್ನತ ಮಟ್ಟದ ಭೇಟಿ, ಸಭೆಗಳನ್ನು ಅಮಾನತುಗೊಳಿಸಲಾಗಿದೆ.