ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಜಾರಿಗೆ ಪಾಕ್ ಸುಪ್ರೀಂಕೋರ್ಟ್ ಆದೇಶ
ಇಸ್ಲಮಾಬಾದ್: ಫೆಬ್ರವರಿ 8ಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಹೊರಡಿಸುವಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಅಲ್ಲದೆ, ಅಧಿಕಾರ ವರ್ಗದವರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಿದ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ ನೀಡಿದ ಆದೇಶವನ್ನು ಅಮಾನತುಗೊಳಿಸಿದೆ. ಸರಕಾರಿ ಸಿಬಂದಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಲಾಹೋರ್ ಹೈಕೋರ್ಟ್ ಬುಧವಾರ ಅಮಾನತುಗೊಳಿಸಿದ್ದರಿಂದ ಗುರುವಾರ ನಡೆಯಬೇಕಿದ್ದ ಚುನಾವಣಾ ಸಿಬಂದಿಗಳ ತರಬೇತಿ ಕಾರ್ಯಕ್ರಮ ಸ್ಥಗಿತಗೊಂಡಿತ್ತು.
ಚುನಾವಣಾ ಸಿಬಂದಿಗಳ ನೇಮಕಕ್ಕೆ ಸಂಬಂಧಿಸಿದ ಯಾವುದೇ ಅರ್ಜಿಗಳ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್ ಲಾಹೋರ್ ಹೈಕೋರ್ಟ್‍ಗೆ ಸೂಚಿಸಿದೆ. `ಚುನಾವಣಾ ಸಿಬಂದಿಗಳ ತರಬೇತಿಯನ್ನು ಸ್ಥಗಿತಗೊಳಿಸುವುದು ನಿಗದಿತ ದಿನದಂದು ಚುನಾವಣೆ ನಡೆಸಲು ತೊಡಕಾಗುವುದರಿಂದ ಇದಕ್ಕೆ ಅವಕಾಶ ನೀಡಲಾಗದು ಎಂದು ಸುಪ್ರೀಂಕೋರ್ಟ್‍ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.