ನ್ಯಾಯಾಂಗದಲ್ಲಿ ಗುಪ್ತಚರ ಸಂಸ್ಥೆಗಳ ಹಸ್ತಕ್ಷೇಪ: ಪಾಕ್ ಹೈಕೋರ್ಟ್ ನ್ಯಾಯಾಧೀಶರ ಆರೋಪ

Update: 2024-03-27 16:26 GMT

Photo : PTI

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಬಲ ಗುಪ್ತಚರ ಸಂಸ್ಥೆಗಳು ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸುವುದರ ವಿರುದ್ಧ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಬೇಕೆಂದು ಇಸ್ಲಾಮಾಬಾದ್ ಹೈಕೋರ್ಟ್‍ನ 6 ನ್ಯಾಯಾಧೀಶರು ಕೋರಿದ್ದಾರೆ.

ನ್ಯಾಯಾಂಗ ವ್ಯವಹಾರಗಳಲ್ಲಿ ಇಂತಹ ಹಸ್ತಕ್ಷೇಪಗಳ ವಿರುದ್ಧ ಸರ್ವೋಚ್ಛ ನ್ಯಾಯಮಂಡಳಿಯು(ಎಸ್‍ಜೆಸಿ) ನ್ಯಾಯಾಂಗ ಸಮಾವೇಶವನ್ನು ಆರಂಭಿಸಬೇಕು ಮತ್ತು ಸಮಾವೇಶದ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ನಿರ್ಣಯವನ್ನು ಅಳವಡಿಸಿಕೊಳ್ಳಬೇಕೆಂದು ಹೈಕೋರ್ಟ್‍ನ 6 ನ್ಯಾಯಾಧೀಶರು ಸಹಿ ಹಾಕಿರುವ ಪತ್ರದಲ್ಲಿ ಒತ್ತಾಯಿಸಲಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಎಸ್‍ಜೆಸಿ ಹೊಂದಿದೆ.

ನ್ಯಾಯಾಂಗದ ವಿಷಯಗಳಲ್ಲಿ ಕಾರ್ಯಾಂಗ ಮತ್ತು ಏಜೆನ್ಸಿಗಳ ಹಸ್ತಕ್ಷೇಪವನ್ನು ಪತ್ರದಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಅವರ ಸಂಬಂಧಿಯೊಬ್ಬರನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

`ಎಸ್‍ಜೆಸಿ ಸೂಚಿಸಿದ ನ್ಯಾಯಾಧೀಶರ ನೀತಿಸಂಹಿತೆಯು ನ್ಯಾಯಾಧೀಶರು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ನ್ಯಾಯಾಂಗ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಪ್ರಕರಣಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಅಥವಾ ವರದಿ ಮಾಡಬೇಕು ಎಂಬ ಬಗ್ಗೆ ಯಾವುದೇ ಮಾರ್ಗದರ್ಶನ ನೀಡುವುದಿಲ್ಲ ಎಂಬುದನ್ನು ಗಮನಿಸಬೇಕು. ರಾಜಕೀಯವಾಗಿ ಪರಿಣಾಮ ಬೀರುವ ವಿಷಯಗಳಲ್ಲಿ ತಮಗೆ ಅನುಕೂಲಕರ ತೀರ್ಪು ಪಡೆಯಲು ನ್ಯಾಯಾಧೀಶರನ್ನು ಬೆದರಿಸುವುದು ಅಥವಾ ಒತ್ತಡ ಹೇರುವ ನೀತಿಯು ದೇಶದ ಕಾರ್ಯನಿರ್ವಾಹಕ ವಿಭಾಗಕ್ಕೆ ವರದಿ ಮಾಡುವ ಗುಪ್ತಚರ ಏಜೆನ್ಸಿಗಳ ಸದಸ್ಯರಿಂದ ಮುಂದುವರಿದಿದೆಯೇ ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ' ಎಂದು ನ್ಯಾಯಾಧೀಶರು ಆಗ್ರಹಿಸಿದ್ದಾರೆ.

ಈ ಮಧ್ಯೆ, ಇಸ್ಲಾಮಾಬಾದ್ ಹೈಕೋರ್ಟ್‍ನ ನ್ಯಾಯಾಧೀಶ ಜಸ್ಟಿಸ್ ಶೌಕತ್ ಅಝೀಝ್ ಸಿದ್ಧಿಕಿಯವರನ್ನು ವಜಾಗೊಳಿಸಿರುವ ಸರಕಾರದ ಆದೇಶ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿದೆ. ರಾವಲ್ಪಿಂಡಿ ವಕೀಲರ ಅಸೋಸಿಯೇಷನ್‍ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದಿಕಿ, ನ್ಯಾಯಾಲಯದ ಕಲಾಪದಲ್ಲಿ ಗುಪ್ತಚರ ಏಜೆನ್ಸಿ ಐಎಸ್‍ಐ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ ಬಳಿಕ ಅವರನ್ನು ವಜಾಗೊಳಿಸಲಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News