ಪಪುವಾ ನ್ಯೂಗಿನಿಯಾ | 26 ಗ್ರಾಮಸ್ಥರ ಹತ್ಯೆ, ಮನೆಗೆ ಬೆಂಕಿ
ಪೋರ್ಟ್ ಮೊರೆಸ್ಬಿ : ದಕ್ಷಿಣ ಪೆಸಿಫಿಕ್ ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾದ ಉತ್ತರದಲ್ಲಿರುವ ಮೂರು ಹಳ್ಳಿಗಳಿಗೆ ನುಗ್ಗಿದ ಕ್ರಿಮಿನಲ್ ಗ್ಯಾಂಗ್ನ ಸದಸ್ಯರು ಹಲವು ಮನೆಗಳಿಗೆ ಬೆಂಕಿ ಹಚ್ಚಿದರಲ್ಲದೆ 16 ಮಕ್ಕಳ ಸಹಿತ ಕನಿಷ್ಠ 26 ಗ್ರಾಮಸ್ಥರನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪೆಸೆಪಿಕ್ ಪ್ರಾಂತದ ಮೂರು ಹಳ್ಳಿಗಳಿಗೆ ಸುಮಾರು 30 ಯುವಕರಿದ್ದ ಗ್ಯಾಂಗ್ ದಾಳಿ ನಡೆಸಿದ್ದು ಮನೆಗಳಿಗೆ ಬೆಂಕಿಹಚ್ಚಿದ ಬಳಿಕ ಎದುರಿಗೆ ಸಿಕ್ಕವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದಾರೆ. ಮಕ್ಕಳು, ಮಹಿಳೆಯರ ಸಹಿತ ಕನಿಷ್ಠ 26 ಮಂದಿಯ ಮೃತದೇಹ ಪತ್ತೆಯಾಗಿದೆ. ಹಲವು ಮೃತದೇಹಗಳನ್ನು ಮೊಸಳೆಗಳು ಎಳೆದೊಯ್ದಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಗ್ರಾಮಸ್ಥರು ಭಯಭೀತರಾಗಿದ್ದು ಹತ್ತಿರದ ಪೊಲೀಸ್ ಠಾಣೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಭೂ ವ್ಯಾಜ್ಯಕ್ಕೆ ಸಂಬಂಧಿಸಿ ದಾಳಿ ನಡೆದಿರುವ ಮಾಹಿತಿಯಿದೆ ಎಂದು ಪೂರ್ವ ಸೆಪಿಕ್ ಪ್ರಾಂತದ ಪೊಲೀಸ್ ಮುಖ್ಯಸ್ಥ ಜೇಮ್ಸ್ ಬೌಗೆನ್ರನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಸಂಸ್ಥೆ ವರದಿ ಮಾಡಿದೆ.
ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಕಮಿಷನರ್ ವೋಕರ್ ಟರ್ಕ್ ಘಟನೆಯನ್ನು ಖಂಡಿಸಿದ್ದಾರೆ.