ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ-ಫಿಲಿಪ್ಪೀನ್ಸ್ ನೌಕೆಗಳ ಡಿಕ್ಕಿ
ಮನಿಲಾ: ವಿವಾದಿತ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಫಿಲಿಪ್ಪೀನ್ಸ್ ನೌಕೆ ಮತ್ತು ಚೀನಾದ ಕರಾವಳಿ ಭದ್ರತಾ ಪಡೆಯ ನೌಕೆ ರವಿವಾರ ಮುಖಾಮುಖಿ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.
ಉಭಯ ದೇಶಗಳ ನಡುವಿನ ವಿವಾದಿತ ದ್ವೀಪ ‘ಸ್ಪಾರ್ಟ್ಲಿ ದ್ವೀಪ’ ಸಮೂಹದ ಸೆಕೆಂಡ್ ಥಾಮಸ್ ಶೋಲ್ ಬಂಡೆಗಳ ದಿಬ್ಬದಲ್ಲಿರುವ ತನ್ನ ಸೇನಾನೆಲೆಗೆ ಅಗತ್ಯದ ಸರಕನ್ನು ಸಾಗಿಸುತ್ತಿದ್ದ ನೌಕೆಯನ್ನು ಚೀನಾದ ನೌಕೆ ತಡೆಗಟ್ಟಿದ್ದು ಜಲಫಿರಂಗಿ ದಾಳಿ ನಡೆಸಿದೆ. ಇದರಿಂದ ನೌಕೆಯ ಇಂಜಿನಿಗೆ ಹಾನಿಯಾಗಿದೆ. ಅಲ್ಲದೆ ಶೋಲ್ ದ್ವೀಪಸಮೂಹದ ಬಳಿ ವಿಮೀನುಗಾರಿಕೆ ನಡೆಸುತ್ತಿರುವ ಮೀನುಗಾರರಿಗೆ ಅಗತ್ಯದ ಸಾಮಾಗ್ರಿ ಸಾಗಿಸುತ್ತಿದ್ದ ಸರಕಾರಿ ಸ್ವಾಮ್ಯದ ಎರಡು ದೋಣಿಗಳನ್ನು ಚೀನಾದ ಕರಾವಳಿ ಭದ್ರತಾ ಪಡೆ ಹಾಗೂ ನೌಕಾನೆಲೆಯ ನೌಕೆಗಳು ಅಡ್ಡಗಟ್ಟಿವೆ. ಒಂದು ದೋಣಿಗೆ ಚೀನಾದ ನೌಕೆ ಡಿಕ್ಕಿ ಹೊಡೆದಿದ್ದು ತೀವ್ರ ಹಾನಿಯಾಗಿದೆ ಎಂದು ಫಿಲಿಪ್ಪೀನ್ಸ್ ಸರಕಾರ ಆರೋಪಿಸಿದೆ.
ಆದರೆ ಇದನ್ನು ನಿರಾಕರಿಸಿರುವ ಚೀನಾ ಕರಾವಳಿ ಪಡೆ ‘ನಮ್ಮ ನಿರಂತರ ಎಚ್ಚರಿಕೆಯನ್ನು ಕಡೆಗಣಿಸಿ ಫಿಲಿಪ್ಪೀನ್ಸ್ ನ ನೌಕೆ ಚೀನಾದ ನೌಕೆಗೆ ಉದ್ದೇಶಪೂರ್ವಕವಾಗಿ ಡಿಕ್ಕಿಯಾಗಿದ್ದು ನಮ್ಮ ನೌಕೆಗೆ ಹಾನಿಯಾಗಿದೆ. ಈ ಹಾನಿಗೆ ಫಿಲಿಪ್ಪೀನ್ಸ್ ಹೊಣೆಯಾಗಿದೆ’ ಎಂದು ಪ್ರತಿಕ್ರಿಯಿಸಿದೆ.