ಜೈಲಿಗೆ ಬೆಂಕಿ: ನೂರಾರು ಕೈದಿಗಳ ಪರಾರಿ
ಢಾಕಾ : ಬಾಂಗ್ಲಾದೇಶದಲ್ಲಿ ಶುಕ್ರವಾರ ಪ್ರತಿಭಟನೆ, ಹಿಂಸಾಚಾರ ಮತ್ತೆ ತೀವ್ರಗೊಂಡಿದ್ದು ನರ್ಸಿಂಗ್ಡಿ ಜಿಲ್ಲೆಯ ಜೈಲಿನ ಮೇಲೆ ದಾಳಿ ನಡೆಸಿದ ಗುಂಪೊಂದು ಜೈಲಿನಲ್ಲಿದ್ದ ಕೈದಿಗಳನ್ನು ಬಂಧಮುಕ್ತಗೊಳಿಸಿದ ಬಳಿಕ ಜೈಲಿಗೆ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.
ಜೈಲಿನ ದ್ವಾರವನ್ನು ಒಡೆದು ಪ್ರತಿಭಟನಾಕಾರರು ಜೈಲಿನೊಳಗೆ ನುಗ್ಗಿದ್ದು ಜೈಲಿನ ಕೋಣೆಯ ಬಾಗಿಲುಗಳನ್ನು ತೆಗೆದಿದ್ದಾರೆ. ಆಗ 100ಕ್ಕೂ ಅಧಿಕ ಕೈದಿಗಳು ಕೈಯಲ್ಲಿರುವ ಕೋಳಗಳ ಸಹಿತ ಜೈಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಪ್ರಮುಖ ಪ್ರತಿಪಕ್ಷವಾದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‍ಪಿ)ಯ ದೇಶಭ್ರಷ್ಟ ಉಸ್ತುವಾರಿ ಅಧ್ಯಕ್ಷ ತಾರಿಕ್ ರಹ್ಮಾನ್, ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ `ಎಕ್ಸ್' ಮಾಡಿದ್ದಾರೆ. `ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿ ಈ ಹೋರಾಟವನ್ನು ಮುಂದುವರಿಸಲು ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಜನಸಾಮಾನ್ಯರಿಗೆ ಕಳಕಳಿಯಿಂದ ವಿನಂತಿ ಮಾಡುವುದಾಗಿ' ಅವರು ಪೋಸ್ಟ್ ಮಾಡಿದ್ದಾರೆ.