ಚೀನಾವನ್ನು ನಿಗ್ರಹಿಸಿ, ಭಾರತದ ಜತೆ ಶಾಂತಿ ಕಾಪಾಡಿಕೊಳ್ಳಿ ; ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

Update: 2023-12-18 17:42 GMT

Photo: NDTV

ವಾಷಿಂಗ್ಟನ್: ಚೀನಾವನ್ನು ನಿಗ್ರಹಿಸಿ, ಪಾಕಿಸ್ತಾನದಲ್ಲಿ ಅದರ ಪಾತ್ರವನ್ನು ಆರ್ಥಿಕ ಕಾರಿಡಾರ್ ಗೆ ಮಾತ್ರ ಸೀಮಿತಗೊಳಿಸಬೇಕು. ಭದ್ರತಾ ವ್ಯವಸ್ಥೆಯಲ್ಲಿ ಚೀನಾಕ್ಕೆ ಯಾವುದೇ ಪ್ರವೇಶವನ್ನು ಒದಗಿಸಬಾರದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನ ಸೇನಾ ಸಿಬಂದಿ ಮುಖ್ಯಸ್ಥ (ಸಿಒಎಎಸ್) ಜನರಲ್ ಸೈಯದ್ ಆಸಿಮ್ ಮುನೀರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೊನಿ ಬ್ಲಿಂಕೆನ್, ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್, ಸೇನಾ ಸಿಬಂದಿ ಮುಖ್ಯಸ್ಥ ಜನರಲ್ ಚಾಲ್ರ್ಸ್ ಬ್ರೌನ್‍ರನ್ನು ಭೇಟಿಯಾಗಿ ಆರ್ಥಿಕ ನೆರವಿನ ಬಗ್ಗೆ ಚರ್ಚಿಸಿದ್ದರು. ಪಾಕಿಸ್ತಾನಕ್ಕೆ ಯಾವುದೇ ಆರ್ಥಿಕ ನೆರವು ಬೇಕಿದ್ದರೂ ಭಾರತದ ಜತೆ ವ್ಯಾಪಾರ ಸಂಬಂಧ ಸೇರಿದಂತೆ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಭಾರತದ ಜತೆ ಸಾಧ್ಯವಾದಷ್ಟು ಬೇಗ ಮಾತುಕತೆ ಪುನರಾರಂಭಿಸಬೇಕು ಮತ್ತು ನಿಯಂತ್ರಣ ರೇಖೆಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಂಡು ಭಾರತದ ಜತೆಗಿನ ವ್ಯಾಪಾರ ಸಂಬಂಧ ಮುಂದುವರಿಸಬೇಕು ಎಂದು ಈ ಸಂದರ್ಭ ಅಮೆರಿಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2021ರಲ್ಲಿ ಅಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ಅಮೆರಿಕ ವಾಪಾಸು ಕರೆಸಿಕೊಂಡಂದಿನಿಂದ ಪಾಕ್-ಅಮೆರಿಕ ಸಂಬಂಧ ಹಳಸಿದೆ. ಅಮೆರಿಕವು ಪಾಕಿಸ್ತಾನದ ಪ್ರಮುಖ ರಫ್ತು ತಾಣವಾಗಿರುವುದರಿಂದ ಮುನೀರ್ ಅವರ ಅಮೆರಿಕ ಭೇಟಿ ಆರ್ಥಿಕ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟಿದೆ ಎಂದು `ಡಾನ್' ಪತ್ರಿಕೆ ವರದಿ ಮಾಡಿದೆ.

ದಕ್ಷಿಣ ಏಶ್ಯಾದಲ್ಲಿ ಕಾರ್ಯತಂತ್ರದ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಪ್ರಾದೇಶಿಕ ಭದ್ರತಾ ಸಮಸ್ಯೆಗಳು ಮತ್ತು ಬೆಳವಣಿಗೆಗಳ ಕುರಿತು ಪರಸ್ಪರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಮುನೀರ್ ಒತ್ತಿಹೇಳಿದ್ದಾರೆ ಎಂದು ವರದಿ ಹೇಳಿದೆ.

ಉನ್ನತ ಗುಪ್ತಚರ ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿ ಚೀನಾದ ಹೊರಠಾಣೆಗಳ ನಿರ್ಮಾಣವನ್ನು ತಡೆಯುವ ಉದ್ದೇಶದ ಕ್ರಮ ಇದಾಗಿದೆ. ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ತನ್ನ ನಾಗರಿಕರಿಗೆ ಬಲೂಚಿಸ್ತಾನದ ಗ್ವಾರ್ದರ್‍ನಲ್ಲಿ ಮಿಲಿಟರಿ ಹೊರಠಾಣೆಗಳನ್ನು ನಿರ್ಮಿಸುವುದು ಮತ್ತು ತನ್ನ ಯುದ್ಧವಿಮಾನಗಳಿಗೆ ಗ್ವಾರ್ದರ್ ಅಂತರಾಷ್ಟ್ರೀಯ ವಿಮಾನನಿಲ್ದಾಣ ಬಳಕೆಗೆ ಅನುವು ಮಾಡಿಕೊಡುವಂತೆ ಪಾಕ್ ಮೇಲೆ ಒತ್ತಡ ಹೇರುವುದು ಚೀನಾದ ಯೋಜನೆಯಾಗಿದೆ.

ಕಳೆದ ಸೆಪ್ಟಂಬರ್ ನಲ್ಲಿ ಅಮೆರಿಕದ ರಾಯಭಾರಿ ಡೊನಾಲ್ಡ್ ಬ್ಲೋಮ್ ಚೀನಾ ಹೂಡಿಕೆ ಮಾಡಿರುವ ಬಲೂಚಿಸ್ತಾನದ ಗ್ವಾರ್ದರ್ ಬಂದರಿಗೆ ರಹಸ್ಯವಾಗಿ ಭೇಟಿ ನೀಡಿದ್ದರು. ಇದು ಪಾಕಿಸ್ತಾನದೊಂದಿಗಿನ ಅಮೆರಿಕದ ಸೌಹಾರ್ದಯುತ ರಾಜತಾಂತ್ರಿಕತೆಯ ಪ್ರಾರಂಭವನ್ನು ಸೂಚಿಸುತ್ತದೆ . ಕೆಲವು ಅಭಿವೃದ್ಧಿ ಯೋಜನೆಗಳಲ್ಲಿ ಚೀನಾದ ಷರತ್ತುಗಳನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಉತ್ಸುಕವಾಗಿಲ್ಲ ಮತ್ತು ಅಮೆರಿಕದ `ಕ್ಯಾಂಪ್'ಗೆ ತೆರಳಲು ಸಿದ್ಧವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್

ಗ್ವಾರ್ದರ್ ಬಂದರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ)ಯ ಭಾಗವಾಗಿದ್ದು ಇದನ್ನು 2015ರಿಂದ ಚೀನಾ ಮುನ್ನಡೆಸುತ್ತಿದೆ. ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ. ಇದಲ್ಲದೆ 2030ರವರೆಗೆ ಸಿಪಿಇಸಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಚೀನಾ `ಸಿಲ್ಕ್ ರೋಡ್ ಫಂಡ್' ಅನ್ನು ಸ್ಥಾಪಿಸಿದೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News