ಭಾರತಕ್ಕೆ ಹಿಂದಿರುಗಿ : ಕೆನಡಾದ ಹಿಂದುಗಳಿಗೆ ಖಾಲಿಸ್ತಾನ್ ಪರ ಗುಂಪಿನ ತಾಕೀತು

Update: 2024-08-20 16:30 GMT

PC : PTI 

ಟೊರಂಟೊ : ಭಾರತದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರವಿವಾರ ಟೊರಂಟೊದಲ್ಲಿ ನಡೆದ `ಇಂಡಿಯಾ ಡೇ ಪರೇಡ್' ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಖಾಲಿಸ್ತಾನ್ ಪರ ಗುಂಪೊಂದು `ಕೆನಡಾದಲ್ಲಿರುವ ಹಿಂದುಗಳೇ ಭಾರತಕ್ಕೆ ಹಿಂದಿರುಗಿ' ಎಂದು ಘೋಷಣೆ ಕೂಗಿರುವುದಾಗಿ ವರದಿಯಾಗಿದೆ.

`ಪನೋರಮಾ ಇಂಡಿಯಾ' ಸಂಘಟನೆಯ ಆಶ್ರಯದಲ್ಲಿ ನಡೆದ ಇಂಡಿಯಾ ಡೇ ಪರೇಡ್‍ಗೆ ಟೊರಂಟೊ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಹೊರಗೆ ಗುಂಪು ಸೇರಿದ ಖಾಲಿಸ್ತಾನ್ ಪರ ಸದಸ್ಯರು `ಖಾಲಿಸ್ತಾನ್ ರ‍್ಯಾಲಿ' ನಡೆಸುವುದಾಗಿ ಘೋಷಿಸಿದರು. ಇದು ಖಾಲಿಸ್ತಾನ್ ಸಿಖ್ ಹಾಗೂ ಕೆನಡಿಯನ್ ಹಿಂದುಗಳ ನಡುವಿನ ಮುಖಾಮುಖಿ ಎಂದು ಖಾಲಿಸ್ತಾನ್ ಪರ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಸಿತ್ತು.

ಕೆನಡಾದಲ್ಲಿರುವ ಹಿಂದುಗಳನ್ನು ಗುರಿಯಾಗಿಸುತ್ತಿರುವ ಖಲಿಸ್ತಾನ್ ಪರ ಗುಂಪುಗಳ ಕೃತ್ಯವನ್ನು ಭಾರತೀಯ ಕೆನಡಿಯನ್ ಸಮುದಾಯದ ಗುಂಪು ಖಂಡಿಸಿದೆ. `ರಾಜಕಾರಣಿಗಳ ಅಸಡ್ಡೆಯಿಂದಾಗಿ ಕೆನಡಾದಲ್ಲಿ ಹಿಂದುಗಳ ವಿರುದ್ಧದ ಚಟುವಟಿಕೆಗಳು ನಿಯಂತ್ರಣ ಮೀರುತ್ತಿವೆ. ಕೆನಡಾದ ಹಿಂದುಗಳು ನಡೆಸುವ ಯಾವುದೇ ಕಾರ್ಯಕ್ರಮಕ್ಕೆ ಖಾಲಿಸ್ತಾನ್ ಪ್ರತಿಭಟನಾಕಾರರು ಅಡ್ಡಿಪಡಿಸುತ್ತಿದ್ದಾರೆ. ಕೆಲ ವರ್ಷಗಳಿಂದ `ಭಾರತದ ವಿರುದ್ಧದ ರಾಜಕೀಯ ಭಾಷಣ' ಎಂಬ ಹೆಸರಿನಲ್ಲಿ ಕೆನಡಾದಲ್ಲಿರುವ ಹಿಂದು ಸಮುದಾಯವನ್ನು ಗುರಿಯಾಗಿಸಿದ ದಾಳಿ ಹೆಚ್ಚುತ್ತಿದೆ' ಎಂದು ಉತ್ತರ ಅಮೆರಿಕಾದ ಹಿಂದುಗಳ ಒಕ್ಕೂಟದ ಕೆನಡಾ ಘಟಕ ಕಳವಳ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News