ಇಸ್ರೇಲ್- ಹಿಜ್ಬುಲ್ಲಾ ಸಂಘರ್ಷ ಉಲ್ಬಣಗೊಂಡರೆ ಮಹಾ ದುರಂತದ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

Update: 2024-06-26 17:38 GMT

ಸಾಂದರ್ಭಿಕ ಚಿತ್ರ |  PC : NDTV

 

ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟ ಉಲ್ಬಣಿಸುವ ಅಪಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಇದರಿಂದ ಲೆಬನಾನ್ ಮತ್ತು ಇಸ್ರೇಲ್‍ನ ಜನತೆಯ ಬವಣೆ ಹೆಚ್ಚುವುದು ಮಾತ್ರವಲ್ಲ, ಪ್ರದೇಶದ ಮೇಲೆ ಮಹಾ ವಿಪತ್ತಿನ ಪರಿಣಾಮದ ಅಪಾಯವಿರುವುದಾಗಿ ಎಚ್ಚರಿಕೆ ನೀಡಿದೆ.

ಉದ್ವಿಗ್ನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಎರಡೂ ಕಡೆಯವರು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಧ್ಯಪ್ರಾಚ್ಯಕ್ಕೆ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ ಟೋರ್ ವೆನ್ನೆಸ್‍ಲ್ಯಾಂಡ್ ಆಗ್ರಹಿಸಿದ್ದಾರೆ.

ಇಸ್ರೇಲ್ ಮತ್ತು ಲೆಬನಾನ್ ನಡುವಿನ ಗಡಿಯಲ್ಲಿನ ಉದ್ವಿಗ್ನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಗಡಿಯಾಚೆಗಿನ ಗುಂಡಿನ ವಿನಿಮಯ ಹೆಚ್ಚಾಗಿದೆ. `ಈಗ ಸಂಘರ್ಷವು ವಿಶಾಲ ಪ್ರದೇಶಗಳಿಗೆ ಹರಡುವ ಅಪಾಯವು ವಾಸ್ತವವಾಗಿದ್ದು ಅದನ್ನು ತಪ್ಪಿಸಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳೆದ ವಾರ ಎಚ್ಚರಿಕೆ ನೀಡಿದ್ದರು.

ನಿರ್ಣಯ ಸಂಖ್ಯೆ 2334ರ ಅನುಷ್ಟಾನದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವೆನ್ನೆಸ್‍ಲ್ಯಾಂಡ್ `ಪೂರ್ವ ಜೆರುಸಲೇಮ್ ಸೇರಿದಂತೆ ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತು ವಿಸ್ತರಣೆ ತೀವ್ರ ಕಳವಳಕಾರಿಯಾಗಿದೆ. ಈ ವಸಾಹತುಗಳು ಕಾನೂನುಬದ್ಧತೆಯನ್ನು ಹೊಂದಿಲ್ಲ ಮತ್ತು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇಸ್ರೇಲ್ ಇಂತಹ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು' ಎಂದು ಆಗ್ರಹಿಸಿದರು.

2016ರಲ್ಲಿ ಅನುಮೋದಿಸಲಾದ ವಿಶ್ವಸಂಸ್ಥೆಯ ನಿರ್ಣಯ ಸಂಖ್ಯೆ 2334 `ಇಸ್ರೇಲಿ ವಸಾಹತು ಚಟುವಟಿಕೆಗಳನ್ನು ಕೊನೆಗೊಳಿಸಬೇಕು, ನಾಗರಿಕರ ವಿರುದ್ಧದ ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ, ಪ್ರಚೋದನಕಾರಿ ಕ್ರಮಗಳು ಹಾಗೂ ಹೇಳಿಕೆಗಳನ್ನು ನೀಡದಂತೆ ಎರಡೂ ಕಡೆಯವರನ್ನು' ಒತ್ತಾಯಿಸುತ್ತದೆ.

ಪೆಲೆಸ್ತೀನೀಯರು ಮತ್ತು ಇಸ್ರೇಲ್ ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ಪ್ರಕರಣ ಹೆಚ್ಚಿರುವುದು ಉದ್ವಿಗ್ನತೆಯನ್ನು ಪ್ರಚೋದಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಸಾವು-ನೋವು ಬಂಧನಕ್ಕೆ ಕಾರಣವಾಗಿದೆ. ದಾಳಿಯ ಅಪರಾಧಿಗಳನ್ನು ಗುರುತಿಸಿ ಹೊಣೆಗಾರರನ್ನಾಗಿಸಬೇಕು ಎಂದ ಅವರು, ಗಾಝಾದಲ್ಲಿನ ಸಂಘರ್ಷ ಪ್ರಾದೇಶಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ದೂಷಿಸಿದರು. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಮತ್ತು ತಕ್ಷಣ ಮಾನವೀಯ ಕದನವಿರಾಮ ಜಾರಿಗೊಳ್ಳಬೇಕು. ಈ ನಿಟ್ಟಿನಲ್ಲಿ ಒಪ್ಪಂದ ಸೂತ್ರವೊಂದನ್ನು ಮಂಡಿಸಲಾಗಿದ್ದು ಅದನ್ನು ಒಪ್ಪಬೇಕು. ಇಂತಹ ಒಪ್ಪಂದ ಏರ್ಪಡಬೇಕೆಂದು ಈಜಿಪ್ಟ್, ಖತರ್ ಮತ್ತು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳನ್ನು ವಿಶ್ವಸಂಸ್ಥೆ ಸ್ವಾಗತಿಸುತ್ತದೆ ಎಂದರು.

ಹಸಿವು ಮತ್ತು ಆಹಾರದ ಅಭದ್ರತೆ ಮುಂದುವರಿದಿದೆ. ಉತ್ತರದ ಪ್ರಾಂತಗಳಲ್ಲಿ ಬರಗಾಲದ ಸಮಸ್ಯೆ ಸನ್ನಿಹಿತವಾಗಿದೆ, ದಕ್ಷಿಣದಲ್ಲಿ ಆಹಾರದ ಅಭದ್ರತೆಯ ಸಮಸ್ಯೆ ಬಿಗಡಾಯಿಸಿರುವ ವರದಿಯಿದೆ. ಆಹಾರ ಪೂರೈಕೆ ಹೆಚ್ಚಿಸುವ ಮೂಲಕ ಈ ಬಿಕ್ಕಟ್ಟನ್ನು ನಿವಾರಿಸಬಹುದು. ಗಾಝಾದ ಬಹುತೇಕ ಸಮುದಾಯ ಆಹಾರ ಅಭದ್ರತೆಯ ಅಧಿಕ ಅಪಾಯವನ್ನು ಎದುರಿಸುತ್ತಿದ್ದು ಸುಮಾರು 5 ಲಕ್ಷ ಜನತೆ ಮಹಾದುರಂತದ ಅಪಾಯದಲ್ಲಿದ್ದಾರೆ ಎಂದು ವೆನ್ನೆಸ್‍ಲ್ಯಾಂಡ್ ಎಚ್ಚರಿಕೆ ನೀಡಿದ್ದಾರೆ.

ಮಾನವೀಯ ನೆರವು ಪೂರೈಸುತ್ತಿರುವ ಕಾರ್ಯಕರ್ತರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಯುದ್ಧದಿಂದ ಜರ್ಝರಿತ ಗಾಝಾ ಪ್ರದೇಶದಲ್ಲಿ ನೆರವು ವಿತರಣೆ ಕಾರ್ಯಕ್ರಮವನ್ನು ಅಮಾನತುಗೊಳಿಸುವುದಾಗಿ ವಿಶ್ವಸಂಸ್ಥೆ ಇಸ್ರೇಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಭದ್ರತೆಯ ಕಾರಣಕ್ಕಾಗಿ ಗಾಝಾದಲ್ಲಿ ಅಮೆರಿಕ ನಿರ್ಮಿಸಿರುವ ತಾತ್ಕಾಲಿಕ ಧಕ್ಕೆ(ಹಡಗುಕಟ್ಟೆ)ಯಿಂದ ನೆರವು ವಿತರಣೆ ಕಾರ್ಯವನ್ನು `ವಿಶ್ವಸಂಸ್ಥೆಯ ಜಾಗತಿಕ ಆಹಾರ ಯೋಜನೆ' ಈಗಾಗಲೇ ಅಮಾನತುಗೊಳಿಸಿದೆ.

ಆಹಾರದ ತೀವ್ರ ಕೊರತೆ

ಈ ಮಧ್ಯೆ, ಗಾಝಾದಲ್ಲಿ ಬರಗಾಲದ ತೀವ್ರ ಅಪಾಯವಿದೆ. ಇಲ್ಲಿನ ಜನಸಂಖ್ಯೆಯ 50%ಕ್ಕಿಂತಲೂ ಹೆಚ್ಚಿನವರು ತಮ್ಮ ಮನೆಗಳಲ್ಲಿ ಆಹಾರದ ದಾಸ್ತಾನನ್ನು ಹೊಂದಿಲ್ಲ ಮತ್ತು 20 ಪ್ರತಿಶತಕ್ಕಿಂತಲೂ ಹೆಚ್ಚಿನವರು ಆಹಾರವಿಲ್ಲದೆ ದಿನ ಕಳೆಯುವಂತಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಮ್ಯಾಕ್ಸಿಮೊ ಟೊರೆರೊ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಗಾಝಾದಲ್ಲಿ ಜನಸಂಖ್ಯೆಯ 25%ದಷ್ಟು ಜನತೆ ದುರಂತ ಮಟ್ಟದ ಆಹಾರ ಅಭದ್ರತೆ ಎದುರಿಸುತ್ತಿದ್ದರೆ 1,50,000 ಜನರು ಆಹಾರ ಅಭದ್ರತೆಯ ತುರ್ತು ಪರಿಸ್ಥಿತಿಯ ಹಂತದಲ್ಲಿದ್ದಾರೆ. ರಫಾ ಸೇರಿದಂತೆ ದಕ್ಷಿಣ ಗಾಝಾದಲ್ಲಿ ಜನಸಂಖ್ಯೆಯ 20%ದಷ್ಟು ಅಂದರೆ 3,50,000ಕ್ಕೂ ಅಧಿಕ ಜನತೆ ದುರಂತ ಮಟ್ಟದ ಆಹಾರ ಅಭದ್ರತೆ ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News