ರಶ್ಯ: ಅಮೆರಿಕನ್ ಪ್ರಜೆಗೆ 13 ವರ್ಷ ಜೈಲುಶಿಕ್ಷೆ
ಮಾಸ್ಕೊ: ಮಾದಕವಸ್ತು ಕಳ್ಳಸಾಗಣೆ ಪ್ರಕರಣದ ಆಪಾದಿತ ಅಮೆರಿಕದ ಪ್ರಜೆ ಮೈಕೆಲ್ ಟ್ರಾವಿಸ್ ಲೀಕ್ ಗೆ 13 ವರ್ಷ ಜೈಲುಶಿಕ್ಷೆ ವಿಧಿಸಿ ರಶ್ಯದ ನ್ಯಾಯಾಲಯ ತೀರ್ಪು ನೀಡಿದೆ.
ಅಮೆರಿಕದ ಮಾಜಿ ಪ್ಯಾರಟ್ರೂಪರ್ ಮತ್ತು ಸಂಗೀತ ನಿರ್ದೇಶಕ ಟ್ರಾವಿಸ್ ಮಾಸ್ಕೋದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುವ ಜತೆಗೆ ರಶ್ಯದ ಗಾಯನ ತಂಡಗಳಿಗೆ ಇಂಗ್ಲಿಷ್ ಹಾಡುಗಳನ್ನು ಅನುವಾದ ಮಾಡಿಕೊಡುತ್ತಿದ್ದರು. ಇವರನ್ನು 2023ರ ಜೂನ್ನಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಮಾರಾಟ ಪ್ರಕರಣದಲ್ಲಿ ಮಾಸ್ಕೋದಲ್ಲಿ ಬಂಧಿಸಲಾಗಿತ್ತು. ಕಳೆದ ವಾರ ಮತ್ತೊಬ್ಬ ಅಮೆರಿಕನ್ ಪ್ರಜೆ ರಾಬರ್ಟ್ ವುಡ್ಲ್ಯಾಂಡ್ಗೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ರಶ್ಯದ ನ್ಯಾಯಾಲಯ 12 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಹಲವು ಅಮೆರಿಕನ್ನರು ರಶ್ಯದಲ್ಲಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಉಕ್ರೇನ್ ಯುದ್ಧದ ಬಳಿಕ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಿರುವುದರಿಂದ ತಕ್ಷಣ ರಶ್ಯದಿಂದ ತೆರಳುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.