ರಶ್ಯದ ಪರಮಾಣು ಚಾಲಿತ, ಕ್ಷಿಪಣಿ ಉಡಾವಣಾ ತಾಣ ಪತ್ತೆ : ವರದಿ

Update: 2024-09-03 16:43 GMT

PC : Screenshot from video by the Ministry of Defence of the Russian Federation

ವಾಷಿಂಗ್ಟನ್ : ಅಧ್ಯಕ್ಷ ವ್ಲಾದಿಮಿರ್ ಪುಟಿನ್ `ಅಜೇಯ' ಎಂದು ಹೆಸರಿಸಿರುವ ರಶ್ಯದ ಹೊಸ ಪರಮಾಣು ಚಾಲಿತ-ಪರಮಾಣು ಶಸ್ತ್ರಸಜ್ಜಿತ ಕ್ರೂಸ್ ಕ್ಷಿಪಣಿ 9ಎಂ370 ಬುರೆವೆಸ್ಟ್ನಿಕ್‍ನ ಸಂಭಾವ್ಯ ನಿಯೋಜನಾ ಸ್ಥಳವನ್ನು ಪತ್ತೆಹಚ್ಚಿರುವುದಾಗಿ ಅಮೆರಿಕದ ಇಬ್ಬರು ಸಂಶೋಧಕರು ಹೇಳಿದ್ದಾರೆ.

ಈ ಅತ್ಯಾಧುನಿಕ ಪರಮಾಣು ಸಿಡಿತಲೆ ಶಸ್ತ್ರಾಸ್ತ್ರ ಬಹುತೇಕ ಅನಿಯಮಿತ ವ್ಯಾಪ್ತಿಯನ್ನು ಹೊಂದಿದ್ದು ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಪುಟಿನ್ ಹೇಳಿದ್ದರು. ಆದರೆ ಪುಟಿನ್ ಪ್ರತಿಪಾದನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಕೆಲವು ಪಾಶ್ಚಿಮಾತ್ಯ ತಜ್ಞರು, ಇದು ಹೆಚ್ಚುವರಿ ಸಾಮರ್ಥ್ಯ ಹೊಂದಿರಲಿಕ್ಕಿಲ್ಲ ಮತ್ತು ವಿಕಿರಣ ಉಗುಳುವ ಅಪಾಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಸ್ಕೋದ ಉತ್ತರಕ್ಕೆ 475 ಕಿ.ಮೀ ದೂರದಲ್ಲಿರುವ `ವೊಲೊಗ್ಡ-20 ಮತ್ತು ಚೆಬ್ಸಾರ ಎಂಬ ಎರಡು ಹೆಸರಿನಿಂದ ಕರೆಸಿಕೊಳ್ಳುವ, ಪರಮಾಣು ಸಿಡಿತಲೆ ಶೇಖರಣಾ ಸೌಲಭ್ಯವನ್ನು ಹೊಂದಿರುವ ನಿರ್ಮಾಣ ಯೋಜನೆಯನ್ನು ಜುಲೈ 26ರಂದು ಉಪಗ್ರಹದಿಂದ ಪಡೆದ ಚಿತ್ರಗಳ ಮೂಲಕ ಗುರುತಿಸಲಾಗಿದೆ ಎಂದು ಅಮೆರಿಕದ ವಾಣಿಜ್ಯ ಉಪಗ್ರಹ ಸಂಸ್ಥೆ `ಪ್ಲ್ಯಾನೆಟ್ ಲ್ಯಾಬ್ಸ್; ವರದಿ ಮಾಡಿದೆ.

ನಿರ್ಮಾಣ ಹಂತದಲ್ಲಿರುವ 9 ಸಮತಲ ಉಡಾವಣಾ ಪ್ಯಾಡ್‍ಗಳನ್ನು ಗುರುತಿಸಲಾಗಿದೆ. ಅವುಗಳನ್ನು ದಾಳಿಯಿಂದ ರಕ್ಷಿಸಲು ಅಥವಾ ಆಕಸ್ಮಿಕ ಸ್ಫೋಟವನ್ನು ತಡೆಯಲು ಎತ್ತರದ ತಡೆಗೋಡೆಗಳ ಒಳಗೆ ನಿರ್ಮಿಸಲಾಗಿದೆ. ಈ ತಡೆಗೋಡೆಗಳು ಹಾಗೂ ಮತ್ತೊಂದು ಕಟ್ಟಡಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದು ಇಲ್ಲಿ ಕ್ಷಿಪಣಿಗಳನ್ನು ಸಂಗ್ರಹಿಸಿಡಬಹುದು. ಇದು ದೊಡ್ಡ, ಸ್ಥಿರ ಕ್ಷಿಪಣಿಗಳನ್ನು ಶೇಖರಿಸಿಡಲು ಸೂಕ್ತವಾಗಿದೆ ಎಂದು ಸಿಎನ್‍ಎ ಸಂಶೋಧನಾ ಸಂಸ್ಥೆಯ ವಿಶ್ಲೇಷಕ ಡೆಕರ್ ಎವ್ಲೆತ್ ಹೇಳಿದ್ದಾರೆ.

ಉಪಗ್ರಹದಿಂದ ಲಭಿಸಿದ ಚಿತ್ರಗಳ ವಿಶ್ಲೇಷಣೆಯು `ಅತ್ಯಂತ ವಿಶಿಷ್ಟವಾದ, ವಿಭಿನ್ನವಾದ ಶಸ್ತ್ರಾಸ್ತ್ರವನ್ನು ಸೂಚಿಸುತ್ತದೆ ಮತ್ತು ನಿಸ್ಸಂಶಯವಾಗಿ ರಶ್ಯವು ಈ ಪರಮಾಣು ಚಾಲಿತ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮತ್ತೊಬ್ಬ ಸಂಶೋಧಕ ಜೆಫ್ರಿ ಲೂಯಿಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News