ಸೌದಿ ಕರೆನ್ಸಿ ಕಳ್ಳಸಾಗಣೆ: ಪಾಕ್ ಏರ್‍ಲೈನ್ಸ್ ಸಿಬ್ಬಂದಿ ಬಂಧನ

Update: 2024-07-29 17:41 GMT

ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್: ಸೌದಿ ಅರೆಬಿಯಾದ ಕರೆನ್ಸಿಯನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನ್ ಇಂಟರ್‍ನ್ಯಾಷನಲ್ ಏರ್‍ಲೈನ್ಸ್‍ನ ಗಗನಸಖಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿಯಾಗಿದೆ.

ತನ್ನ ಸಾಕ್ಸ್ ನಲ್ಲಿ ಬಚ್ಚಿಟ್ಟ ವಿದೇಶಿ ಕರೆನ್ಸಿಯನ್ನು ಗಗನಸಖಿ ಹೊರತೆಗೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಮಾನದಲ್ಲಿ ವಿದೇಶಿ ಕರೆನ್ಸಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಗುಪ್ತಚರ ಏಜೆನ್ಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಲಾಹೋರ್‍ನಿಂದ ದುಬೈಗೆ ತೆರಳಲು ಸಿದ್ಧಗೊಂಡಿದ್ದ ಪಾಕಿಸ್ತಾನ ಇಂಟರ್‍ನ್ಯಾಷನಲ್ ಏರ್‍ಲೈನ್ಸ್(ಪಿಐಎ) ಪಿಕೆ 203 ವಿಮಾನವನ್ನು ಹತ್ತುತ್ತಿದ್ದ ಸಂದರ್ಭ ಗಗನಸಖಿಯನ್ನು ತಡೆದು ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದು ಆಕೆಯ ಸಾಕ್ಸ್‍ನಲ್ಲಿ 1,40,000 ಸೌದಿ ರಿಯಾಲ್(ಸುಮಾರು 10.4 ದಶಲಕ್ಷ ರೂ.) ಹಣ ಪತ್ತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಡಾನ್ ನ್ಯೂಸ್ ಸೋಮವಾರ ವರದಿ ಮಾಡಿದೆ.

ಕಸ್ಟಮ್ಸ್ ಅಧಿಕಾರಿಗಳ ದೂರಿನ ಆಧಾರದಲ್ಲಿ ಸಿಬ್ಬಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸುವುದಾಗಿ ಪಿಐಎ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News