ಬ್ಯಾಂಕಾಕ್ | ಮಾರಣಾಂತಿಕವಾದ ಶಾಲಾ ಪ್ರವಾಸ : ಬಸ್ ಗೆ ಬೆಂಕಿ ಹೊತ್ತಿಕೊಂಡು 25 ಮಂದಿ ಮೃತಪಟ್ಟಿರುವ ಶಂಕೆ
ಬ್ಯಾಂಕಾಕ್ : 44 ಮಂದಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಒಂದರ ಟೈರ್ ಸ್ಫೋಟಗೊಂಡು ಸುಟ್ಟು ಕರಕಲಾಗಿರುವ ಘಟನೆ ಮಂಗಳವಾರ ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಸುಮಾರು 25 ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ವರದಿಗಳ ಪ್ರಕಾರ, ಅಪಘಾತಕ್ಕೀಡಾಗಿರುವ ಬಸ್, ಉಥಾಯ್ ಥಾನಿ ಪ್ರಾಂತ್ಯದಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಿಹಾರಕ್ಕಾಗಿ ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ಮಾರ್ಗಮಧ್ಯೆ, ಉತ್ತರ ಬ್ಯಾಂಕಾಕ್ ನ ಹೆದ್ದಾರಿಯಲ್ಲಿ ಬಸ್ ನ ಟೈರ್ ಸ್ಫೋಟಗೊಂಡು, ಬಸ್ ತಡೆಗೋಡೆಗೆ ಡಿಕ್ಕಿ ಡಿಕ್ಕಿ ಹೊಡೆದಿದೆ. ಆಗ ಬಸ್ ನ ನೈಸರ್ಗಿಕ ಅನಿಲ ಟ್ಯಾಂಕ್ ಗೆ ಬೆಂಕಿ ಹೊತ್ತುಕೊಂಡು ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಅಪಘಾತದ ಕುರಿತು ಥಾಯ್ಲೆಂಡ್ ಪ್ರಧಾನಿ ಪೇಟೊಂಗ್ಟ್ರಾನ್ ಶಿನವತ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಸೂರಿಯ ಜುಂಗ್ರುಂಗ್ರೀಂಗ್ಕಿತ್, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಇದುವರೆಗೆ ಅಸ್ಪಷ್ಟವಾಗಿದ್ದರೂ, ಬಸ್ ಗೆ ಬೆಂಕಿ ಹೊತ್ತುಕೊಂಡ ನಂತರ, 25 ಮಂದಿಯ ಗುರುತನ್ನು ಪತ್ತೆ ಹಚ್ಚಲಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಬಸ್ ನಲ್ಲಿ 38 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಸೇರಿ ಒಟ್ಟು 44 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ನಮಗಿರುವ ಮಾಹಿತಿಯಂತೆ, ಮೂವರು ಶಿಕ್ಷಕರು ಹಾಗೂ 16 ವಿದ್ಯಾರ್ಥಿಗಳು ಬಸ್ ನಿಂದ ಹೊರ ಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.