ಚಿಲಿಯಲ್ಲಿ ತೀವ್ರ ಕಾಡ್ಗಿಚ್ಚು; ಕನಿಷ್ಠ 51 ಬಲಿ

Update: 2024-02-04 17:58 GMT

Photo: reuters.com

ಸ್ಯಾಂಟಿಯಾಗೊ : ಮಧ್ಯ ಚಿಲಿಯಲ್ಲಿ ತೀವ್ರ ಸ್ವರೂಪ ಪಡೆಯುತ್ತಿರುವ ಕಾಡ್ಚಿಚ್ಚಿಗೆ ಕನಿಷ್ಠ 51 ಜನರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಗರ ಪ್ರದೇಶಗಳಿಗೆ ಬೆಂಕಿಯ ಜ್ವಾಲೆ ಹಬ್ಬುವ ಭೀತಿಯಿರುವುದರಿಂದ ತುರ್ತು ಸೇವೆಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ ಎನ್ನಲಾಗಿದೆ.

ಸುಮಾರು 10 ಲಕ್ಷ ಜನ ಸಂಖ್ಯೆ ಹೊಂದಿರುವ ಮಧ್ಯ ಚಿಲಿಯ ವಾಲ್ಪರೈಸೊ ಪ್ರದೇಶದ ಭಾಗಗಳಲ್ಲಿ ಕಪ್ಪು ಹೊಗೆ ಆವರಿಸಿಕೊಂಡಿದೆ ಎಂದು ಹೇಳಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಟ್ರಕ್ ಹಾಗೂ ಹೆಲಿಕಾಪ್ಟರ್ ಬಳಸಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿಯ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ರಕ್ಷಣಾ ತಂಡಗಳು ಬೆಂಕಿ ಆವರಿಸಿರುವ ಪ್ರದೇಶಗಳನ್ನು ತಲುಪಲು ಹೆಣಗಾಡುತ್ತಿವೆ ಎಂದು ಚಿಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಐದು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎಂದು ಆಂತರಿಕ ಸಚಿವ ಕೆರೊಲಿನಾ ತೋಹಾ ಹೇಳಿದ್ದಾರೆ.

"ವಾಲ್ಪಾರೈಸೊ ಸ್ಥಿತಿಯು ಅತ್ಯಂತ ಸೂಕ್ಷ್ಮವಾಗಿದೆ. 500 ಜನರನ್ನು ಬಲಿ ಪಡೆದ 2010 ರ ಭೂಕಂಪದ ನಂತರ ದೇಶವು ಅತ್ಯಂತ ಕೆಟ್ಟ ದುರಂತವನ್ನು ಎದುರಿಸುತ್ತಿದೆ. ಈ ಬಾರಿ ಕಾಡ್ಗಿಚ್ಚಿಗೆ ಆಹುತಿಯಾದ ಪ್ರದೇಶವು ಕಳೆದ ವರ್ಷಕ್ಕಿಂತ ಚಿಕ್ಕದಾಗಿದೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿದೆ. ಬೆಂಕಿ ವೇಗವಾಗಿ ಹಬ್ಬುತ್ತಿದೆ” ಎಂದು ಆಂತರಿಕ ಸಚಿವರು ಹೇಳಿದ್ದಾರೆ.

ರಾಷ್ಟ್ರವನ್ನುದ್ದೇಶಸಿ ದೂರದರ್ಶನದಲ್ಲಿ ಮಾತನಾಡಿದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ದೇಶದ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದಿರುವುದು, ಕಾಡ್ಗಿಚ್ಚಿನ ತೀವ್ರತೆಯ ಬಗ್ಗೆ ದೇಶವನ್ನು ಆತಂಕಕ್ಕೆ ತಳ್ಳಿದೆ.

ಬೇಸಿಗೆಯ ತಿಂಗಳುಗಳಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚುಗಳು ವಿರಳ. ಕಳೆದ ವರ್ಷ ದಾಖಲೆಯ ಶಾಖದ ಅಲೆಯ ಹಿನ್ನೆಲೆಯಲ್ಲಿ, ಸುಮಾರು 27 ಜನರು ಸಾವನ್ನಪ್ಪಿದ್ದರು. ಇದರಿಂದ 400,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶಕ್ಕೆ ಹಾನಿಯಾಗಿತ್ತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News