ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ: ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ
ಢಾಕಾ: ಪ್ರತಿಭಟನಾಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ ಬೆಂಬಲಿಗರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭುಗಿಲಿದ್ದಿರುವ ಹಿಂಸಾಚಾರ ನೂರಾರು ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೆ ಇಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ ನೀಡಿದ್ದಾರೆ.
ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಹಸೀನಾ ಅವರಿಗೆ ರಾಜೀನಾಮೆ ನೀಡಲು ಬಾಂಗ್ಲಾದೇಶ ಸೇನೆ 45 ನಿಮಿಷಗಳ ಕಾಲಾವಕಾಶ ನೀಡಿತ್ತು ಎಂದು ವರದಿಯಾಗಿದೆ.
ಬಾಂಗ್ಲಾದೇಶದಲ್ಲಿ ಹಂಗಾಮಿ ಸರ್ಕಾರ ರಚಿಸಲಾಗುವುದು ಎಂದು ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಶಾಂತಿಗೆ ಕರೆ ನೀಡಿದ್ದಾರೆ. "ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಹಾಗೂ ಇಂದು ರಾತ್ರಿಯೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು,” ಎಂದು ಅವರು ಭರವಸೆ ನೀಡಿದ್ದಾರೆ.
“ಮಿಲಿಟರಿ ಮೇಲೆ ನಂಬಿಕೆಯಿರಿಸಿ, ನಾವು ಎಲ್ಲಾ ಸಾವುಗಳ ತನಿಖೆ ನಡೆಸಿ ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷಿಸುತ್ತೇವೆ. ಯಾವುದೇ ಸೇನೆ ಅಥವಾ ಪೊಲೀಸರು ಗುಂಡು ಹಾರಿಸಬಾರದೆಂದು ಆದೇಶಿಸಿದ್ದೇನೆ,” ಎಂದು ಹೇಳಿದರು.
“ವಿದ್ಯಾರ್ಥಿಗಳ ಕರ್ತವ್ಯ ಶಾಂತಿಯಿಂದಿದ್ದು ನಮ್ಮೊಂದಿಗೆ ಸಹಕರಿಸುವುದಾಗಿದೆ,” ಎಂದು ಅವರು ಹೇಳಿದರು.
ತ್ರಿಪುರಾ ರಾಜಧಾನಿ ಅಗರ್ತಲಾಗೆ ಬಂದಿಳಿದ ಶೇಖ್ ಹಸೀನಾ
ಮೀಸಲಾತಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನಗೈದಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಹೊತ್ತೊಯ್ದ ಮಿಲಿಟರಿ ಹೆಲಿಕಾಪ್ಟರ್ ಇಂದು ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಬಂದಿಳಿದಿದೆ ಎಂದು ತಿಳಿದು ಬಂದಿದೆ. ಶೇಖ್ ಹಸೀನಾ ಜೊತೆಗೆ ಅವರ ಸಹೋದರಿಯೂ ಇದ್ದಾರೆಂದು ತಿಳಿದು ಬಂದಿದೆ.