ದಿಲ್ಲಿಯ ಹಿಂಡನ್ ವಾಯುನೆಲೆಗೆ ಬಂದಿಳಿದ ಶೇಖ್ ಹಸೀನಾ

Update: 2024-08-05 13:20 GMT

ಶೇಖ್ ಹಸೀನಾ | PC : @Tamal0401

ಹೊಸದಿಲ್ಲಿ : ಬಾಂಗ್ಲಾದೇಶದ ನಾಯಕಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಸೋಮವಾರ ಸಂಜೆ ದಿಲ್ಲಿ ಸಮೀಪದ, ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದಿದ್ದಾರೆ.

ಸೋಮವಾರ ಮುಂಜಾನೆ ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ಅವರ ಢಾಕಾದ ನಿವಾಸ ಗೋನೋಬಬಾನ್‌ಗೆ ನುಗ್ಗಿದ್ದರು. ಅಷ್ಟರಲ್ಲಾಗಲೇ ಅವರು ಪಲಾಯನಗೈದಿದ್ದರು. ಮೂಲಗಳ ಪ್ರಕಾರ ದಿಲ್ಲಿಯಿಂದ ಶೇಖ್ ಹಸೀನಾ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.

ಸರಕಾರಿ ಉದ್ಯೋಗದಲ್ಲಿ ಸ್ವಾತಂತ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲಾತಿ ವಿರೋಧಿಸಿ ಪ್ರಾರಂಭಗೊಂಡ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. 300 ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದರು. ಐದು ಬಾರಿ ಪ್ರಧಾನಿಯಾಗಿದ್ದ 73 ವರ್ಷದ ಶೇಖ್ ಹಸೀನಾ ಅವರು ಕೆಲವೇ ಗಂಟೆಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಾಂಗ್ಲಾದೇಶ ಸೇನೆಯು ಸರಕಾರದ ಮೇಲೆ ಹಿಡಿತ ಸಾಧಿಸಿದೆ.

ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಭಾಷಣ ಮಾಡಿದ ಸೇನಾ ಮುಖ್ಯಸ್ಥ ಜನರಲ್ ವೇಕರ್-ಉಜ್-ಝಮಾನ್ ಅವರು ಬಾಂಗ್ಲಾ ಸೇನೆಯು ಮಧ್ಯಂತರ ಸರ್ಕಾರ ರಚಿಸಲಿದೆ ಎಂದರು.

"ದೇಶದ ಆಡಳಿತದಲ್ಲಿ ಬಿಕ್ಕಟ್ಟು ಇದೆ. ನಾನು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದೇನೆ. ಈ ದೇಶವನ್ನು ನಡೆಸಲು ನಾವು ಮಧ್ಯಂತರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ. ನಾನು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಮತ್ತು ನಿಮ್ಮ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸುವ ಭರವಸೆ ನೀಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ದಯವಿಟ್ಟು ಹಿಂಸಾಚಾರವನ್ನು ನಿಲ್ಲಿಸಿ" ಎಂದು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ರವಿವಾರ ನಡೆದ ಘರ್ಷಣೆಯಲ್ಲಿ 100 ಜನರು ಸಾವನ್ನಪ್ಪಿದ್ದಾರೆ. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದುವರೆಗೂ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 300 ದಾಟಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News