ಯುಎಇ, ಸೌದಿಯಲ್ಲಿ ಆಶ್ರಯದ ನಿರೀಕ್ಷೆಯಲ್ಲಿ ಶೇಕ್ ಹಸೀನಾ

Update: 2024-08-07 15:58 GMT

ಶೇಖ್ ಹಸೀನಾ | PC : PTI

ಢಾಕಾ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಆಶ್ರಯ ಕೋರಿ ಸಲ್ಲಿಸಿದ ಮನವಿಯನ್ನು ಬ್ರಿಟನ್ ತಿರಸ್ಕರಿಸಿದ ನಂತರ ಅವರು ಇತರ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.

ತನ್ನ ಕುಟುಂಬದ ಸದಸ್ಯರು ನೆಲೆಸಿರುವ ಯುಎಇ, ಸೌದಿ ಅರೇಬಿಯ, ಫಿನ್ ಲ್ಯಾಂಡ್, ಬೆಲಾರುಸ್ ಅಥವಾ ಖತರ್ನಲ್ಲಿ ಆಶ್ರಯ ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಪರಾರಿಯಾಗಿದ್ದ ಶೇಕ್ ಹಸೀನಾ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದರು ಮತ್ತು ಬ್ರಿಟನ್ ಅಥವಾ ಅಮೆರಿಕದಲ್ಲಿ ಆಶ್ರಯ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಇದೀಗ ಇತರ ಆಯ್ಕೆಗಳನ್ನು ಅವರು ಪರಿಗಣಿಸುತ್ತಿದ್ದಾರೆ. ಹಸೀನಾ ಅವರ ಪುತ್ರಿ ದಿಲ್ಲಿಯಲ್ಲಿದ್ದರೆ, ಪುತ್ರ ಅಮೆರಿಕದಲ್ಲಿ ಮತ್ತು ಸೋದರಳಿಯ(ಸಹೋದರಿ ಶೇಕ್ ರಿಹಾನಾರ ಪುತ್ರ) ಫಿನ್ ಲ್ಯಾಂಡ್ನಲ್ಲಿ ವಾಸಿಸುತ್ತಿದ್ದಾರೆ.

ಓರ್ವ ಖಾಸಗಿ ಪ್ರಜೆಯಾಗಿ ಹಸೀನಾ ಯಾವುದೇ ದೇಶಕ್ಕೆ ಹೋಗುವ ಪ್ರಯತ್ನ ನಡೆಸಬಹುದು. ಆದರೆ ಅವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವಿರುವುದರಿಂದ ಉದಾರವಾದಿ ಪಶ್ಚಿಮ ದೇಶಗಳಲ್ಲಿ ಅವರ ವಿರುದ್ಧ ಮಾನವ ಹಕ್ಕುಗಳ ಪ್ರಕರಣ ದಾಖಲಾಗಬಹುದು ಮತ್ತು ಅವರು ಕಾನೂನು ಸಮಸ್ಯೆ ಎದುರಿಸಬೇಕಾಗಬಹುದು. ಆದ್ದರಿಂದ ರಾಜಕೀಯ ಅಭಯ ದೊರಕದ ಹೊರತು ಯಾವುದೇ ದೇಶಕ್ಕೆ ಅವರು ತೆರಳುವ ಸಾಧ್ಯತೆಯಿಲ್ಲ.

ಹಸೀನಾ ಯುಎಇ, ಸೌದಿ ಅರೇಬಿಯ, ಬೆಲಾರುಸ್ ಅಥವಾ ಖತರ್ನಲ್ಲಿ ತಾತ್ಕಾಲಿಕ ಆಶ್ರಯ ಪಡೆಯಲು ಬಯಸಿದ್ದಾರೆ. ಈ ದೇಶಗಳಲ್ಲಿ ಯಾವುದೂ ಉದಾರವಾದಿ ಪಾಶ್ಚಿಮಾತ್ಯ ಪ್ರಜಾಪ್ರಭುತ್ವವಲ್ಲದ ಕಾರಣ ಹಸೀನಾ ಇಲ್ಲಿ ಯಾವುದೇ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಹಸೀನಾರನ್ನು ಬಂಧಿಸಿ, ಬಾಂಗ್ಲಾಕ್ಕೆ ವಾಪಾಸ್ ಕಳುಹಿಸಲು ಭಾರತಕ್ಕೆ ಆಗ್ರಹ

ಈ ಮಧ್ಯೆ, ಮಾಜಿ ಪ್ರಧಾನಿ ಶೇಕ್ ಹಸೀನಾ ಹಾಗೂ ಅವರ ಸಹೋದರಿ ಶೇಕ್ ರಿಹಾನಾರನ್ನು ಬಂಧಿಸಿ, ಬಾಂಗ್ಲಾದೇಶಕ್ಕೆ ವಾಪಾಸ್ ಕಳುಹಿಸುವಂತೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎ.ಎಂ ಮೆಹಬೂಬ್ ಉದ್ದಿನ್ ಭಾರತವನ್ನು ಆಗ್ರಹಿಸಿರುವುದಾಗಿ `ಡೈಲಿ ಸ್ಟಾರ್' ವರದಿ ಮಾಡಿದೆ.

`ಭಾರತದ ಜನರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಬಯಸಿದ್ದೇವೆ. ದೇಶದಿಂದ ಪರಾರಿಯಾಗಿರುವ ಶೇಕ್ ಹಸೀನಾ ಹಾಗೂ ಅವರ ಸಹೋದರಿಯನ್ನು ದಯವಿಟ್ಟು ಬಂಧಿಸಿ ಅವರನ್ನು ಬಾಂಗ್ಲಾದೇಶಕ್ಕೆ ವಾಪಾಸ್ ಕಳುಹಿಸಿ. ಶೇಕ್ ಹಸೀನಾ ಬಾಂಗ್ಲಾದಲ್ಲಿ ಹಲವಾರು ಜನರನ್ನು ಹತ್ಯೆ ಮಾಡಿದ್ದಾರೆ' ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News