ದಕ್ಷಿಣ ಕೊರಿಯಾ: ತರಬೇತಿ ಸಂದರ್ಭ ಆಕಸ್ಮಿಕ ಬಾಂಬ್ ದಾಳಿ; 7 ಮಂದಿಗೆ ಗಾಯ
Update: 2025-03-06 21:10 IST

ಸಾಂದರ್ಭಿಕ ಚಿತ್ರ
ಸಿಯೋಲ್: ತರಬೇತಿಯ ಸಂದರ್ಭ ಯುದ್ಧ ವಿಮಾನವೊಂದು ಆಕಸ್ಮಿಕವಾಗಿ ಉದುರಿಸಿದ ಬಾಂಬ್ ನಾಗರಿಕ ಪ್ರದೇಶದ ಮೇಲೆ ಬಿದ್ದು ಕನಿಷ್ಟ 7 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವಾಯುಪಡೆ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಉತ್ತರ ಕೊರಿಯಾದ ಗಡಿಭಾಗದ ಸಮೀಪದಲ್ಲಿರುವ ಪೊಚಿಯಾನ್ ಎಂಬಲ್ಲಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ವಾಯು ಪಡೆ ಮತ್ತು ಸೇನೆಯ ತುಕಡಿ ಒಳಗೊಂಡ ಜಂಟಿ ಸಮರಾಭ್ಯಾಸದಲ್ಲಿ ಎಂಟು ಎಂಕೆ-82 ಸಾಮಾನ್ಯ ಉದ್ದೇಶದ ಬಾಂಬ್‍ಗಳನ್ನು ವಾಯುಪಡೆಯ ಕೆಎಫ್-16 ಯುದ್ಧವಿಮಾನಗಳು ನಿಯೋಜಿತ ಗುರಿಯನ್ನು ತಪ್ಪಿ ನಾಗರಿಕ ಪ್ರದೇಶದ ಮೇಲೆ ಉದುರಿಸಿವೆ. ದುರಂತದಲ್ಲಿ 7 ಮಂದಿ ಗಾಯಗೊಂಡಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ. ಒಂದು ಚರ್ಚ್ ಕಟ್ಟಡ, ಎರಡು ಮನೆಗಳಿಗೆ ಹಾನಿಯಾಗಿವೆ ಎಂದು ಯೊನ್ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.