ಕ್ಯಾಲಿಫೋರ್ನಿಯಾದ ಅತಿ ದೊಡ್ಡ ಹಿಂದೂ ದೇವಾಲಯಕ್ಕೆ ಹಾನಿ; ಭಾರತ ವಿರೋಧಿ ಬರಹ

Update: 2025-03-09 13:27 IST
ಕ್ಯಾಲಿಫೋರ್ನಿಯಾದ ಅತಿ ದೊಡ್ಡ ಹಿಂದೂ ದೇವಾಲಯಕ್ಕೆ ಹಾನಿ; ಭಾರತ ವಿರೋಧಿ ಬರಹ

Photo: instagram/bapslosangeles

  • whatsapp icon

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಅತಿ ದೊಡ್ಡ ಬಿಎಪಿಎಸ್ ಹಿಂದೂ ದೇವಾಲಯಕ್ಕೆ ಅಪರಿಚಿತ ದುಷ್ಕರ್ಮಿಗಳು ಹಾನಿಯೆಸಗಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಇದಕ್ಕೂ ಮುನ್ನ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂಯಾರ್ಕ್ ನ ಮೆಲ್ವಿಲ್ಲೆಯಲ್ಲಿರುವ ಮತ್ತೊಂದು ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರದ ಗೋಡೆಗಳ ಮೇಲೆ ದ್ವೇಷಪೂರಿತ ಸಂದೇಶಗಳನ್ನು ಬರೆಯುವ ಮೂಲಕ ವಿರೂಪಗೊಳಿಸಲಾಗಿತ್ತು.

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಬೋಚಸನ್ ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್), ಚಿನೊ ಹಿಲ್ಸ್ ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರ ಅಪವಿತ್ರಗೊಂಡಿದೆ ಎಂದು ಹೇಳಿದೆ.

“ಈ ಬಾರಿ ಕ್ಯಾಲಿಫೋರ್ನಿಯಾದ ಚಿನೊ ಹಿಲ್ಸ್ ನಲ್ಲಿ ಮತ್ತೊಂದು ಮಂದಿರಕ್ಕೆ ಹಾನಿಯೆಸಗಲಾಗಿದ್ದು, ಹಿಂದೂ ಸಮುದಾಯವು ಈ ದ್ವೇಷದ ದಾಳಿಯ ವಿರುದ್ಧ ದೃಢವಾಗಿ ನಿಂತಿದೆ. ಚಿನೊ ಹಿಲ್ಸ್ ಹಾಗೂ ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯಗಳೊಂದಿಗೆ ಎಂದಿಗೂ ದ್ವೇಷ ನೆಲೆಯೂರಲು ನಾವು ಬಿಡುವುದಿಲ್ಲ” ಎಂದು ಬಿಎಪಿಎಸ್ ಸಾರ್ವಜನಿಕ ವ್ಯವಹಾರಗಳ ವಿಭಾಗ ಎಕ್ಸ್ ಪೋಸ್ಟ್ ನಲ್ಲಿ ಶಪಥ ಮಾಡಿದೆ.

“ನಮ್ಮ ಮಾನವೀಯತೆ ಹಾಗೂ ನಂಬಿಕೆಯು ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ” ಎಂದೂ ಅದು ಹೇಳಿದೆ.

ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ(ಸಿಒಎಚ್ಎನ್ಎ)ವು ಈ ಹಿಂದೆ ನಡೆದಿದ್ದ ಇಂತಹ ಪ್ರಕರಣಗಳತ್ತ ಗಮನ ಸೆಳೆದಿದ್ದು, ಈ ಕುರಿತು ಸಂಪೂರ್ಣ ತನಿಖೆಗಾಗಿ ಆಗ್ರಹಿಸಿದೆ.

“ಮತ್ತೊಂದು ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ದೇವಾಲಯ ಧ್ವಂಸಗೊಂಡಿದೆ. ಅಮೆರಿಕದಲ್ಲಿ ಹಿಂದೂಗಳ ಬಗ್ಗೆ ದ್ವೇಷವಿಲ್ಲ ಹಾಗೂ ಅವೆಲ್ಲ ಕಪೋಲಕಲ್ಪಿತ ಆರೋಪಗಳು ಎಂದು ಹೇಳುವ ಮಾಧ್ಯಮಗಳು ಮತ್ತು ಶಿಕ್ಷಣ ತಜ್ಞರು ಈಗ ಏನು ಹೇಳುತ್ತಾರೆ?” ಎಂದು ಅದು ಪ್ರಶ್ನಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News