ಪರಸ್ಪರ ವೀಸಾ ವಿನಾಯಿತಿ ಘೋಷಿಸಿದ ಥೈಲ್ಯಾಂಡ್, ಚೀನಾ
ಬ್ಯಾಂಕಾಕ್ : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಥೈಲ್ಯಾಂಡ್ ಮತ್ತು ಚೀನಾಗಳು ಪರಸ್ಪರ ವೀಸಾ ವಿನಾಯಿತಿ ಉಪಕ್ರಮವನ್ನು ಘೋಷಿಸಿವೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ತತ್ತರಿಸಿ ಹೋಗಿದ್ದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಕ್ರಮ ಇದಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಬ್ಯಾಂಕಾಕ್‍ನಲ್ಲಿ ಥೈಲ್ಯಾಂಡ್ ಮತ್ತು ಚೀನಾದ ವಿದೇಶಾಂಗ ಸಚಿವರ ನಡುವಿನ ಸಭೆಯ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಮಾರ್ಚ್ 1ರಿಂದ ಅಸ್ತಿತ್ವಕ್ಕೆ ಬರಲಿದೆ. `ಈ ವೀಸಾ ಮುಕ್ತ ಯುಗವು ಜನರಿಂದ ಜನರ ವಿನಿಮಯವನ್ನು ಹೊಸ ಎತ್ತರಕ್ಕೆ ತಲುಪಿಸಲಿದೆ. ಥೈಲ್ಯಾಂಡ್‍ಗೆ ಭೇಟಿ ನೀಡುವ ಚೀನೀಯರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆ. ಚೀನಾ-ಥೈಲ್ಯಾಂಡ್ ರೈಲುಮಾರ್ಗದ ನಿರ್ಮಾಣವನ್ನು ವೇಗಗೊಳಿಸಲು ಮತ್ತು ಅಂತರಾಷ್ಟ್ರೀಯ ಅಪರಾಧವನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಲು ಉಭಯ ದೇಶಗಳು ಪ್ರತಿಜ್ಞೆ ಮಾಡಿವೆ' ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜಂಟಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ಅಂದರೆ 2019ರಲ್ಲಿ ಥೈಲ್ಯಾಂಡ್‍ಗೆ 11 ದಶಲಕ್ಷ ಚೀನೀ ಪ್ರಜೆಗಳು ಭೇಟಿ ನೀಡಿದ್ದರೆ 2023ರಲ್ಲಿ ಈ ಪ್ರಮಾಣ 3.5 ದಶಲಕ್ಷಕ್ಕೆ ಕುಸಿದಿದೆ. ಬ್ಯಾಂಕಾಕ್‍ನಲ್ಲಿ ಶನಿವಾರ ನಡೆದ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಜತೆಯೂ ವಾಂಗ್ ಯಿ ಮಾತುಕತೆ ನಡೆಸಿದ್ದು ದ್ವಿಪಕ್ಷೀಯ ಸಂಬಂಧ, ತೈವಾನ್, ಇರಾನ್ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.