ಇದೇ ಮೊದಲ ಬಾರಿಗೆ ಪಾಕ್ ಸಾರ್ವತ್ರಿಕ ಚುನಾವಣೆಗೆ ಹಿಂದೂ ಮಹಿಳೆ ನಾಮಪತ್ರ ಸಲ್ಲಿಕೆ
Update: 2023-12-26 18:01 GMT
ಇಸ್ಲಮಾಬಾದ್: ಇದೇ ಮೊದಲ ಬಾರಿಗೆ 2024ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೂ ಮಹಿಳೆಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ ಎಂದು `ಡಾನ್' ವರದಿ ಮಾಡಿದೆ.
ಖೈಬರ್ ಪಖ್ತೂಂಕ್ವಾದ ಬುನೇರ್ ಜಿಲ್ಲೆಯ ನಿವಾಸಿ ಡಾ. ಸವೀರಾ ಪ್ರಕಾಶ್ `ಸಾಮಾನ್ಯ ಕ್ಷೇತ್ರ'ಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದು, ತನ್ನ ಉಮೇದುವಾರಿಕೆಗೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅನುಮೋದನೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿವೃತ್ತ ವೈದ್ಯರಾಗಿರುವ ಅವರ ತಂದೆ ಓಮ್ಪ್ರಕಾಶ್ ಕಳೆದ 35 ವರ್ಷದಿಂದ ಪಿಪಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಪಾಕಿಸ್ತಾನ ಚುನಾವಣಾ ಆಯೋಗದ ಇತ್ತೀಚಿನ ತಿದ್ದುಪಡಿಯ ಪ್ರಕಾರ, ಸಾಮಾನ್ಯ ಕ್ಷೇತ್ರಗಳಲ್ಲಿ 5% ಸೀಟುಗಳನ್ನು ಮಹಿಳೆಯರಿಗೆ ಕಡ್ಡಾಯವಾಗಿ ಮೀಸಲಿಡಬೇಕು. ಪಾಕಿಸ್ತಾನದಲ್ಲಿ 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.