ಜರ್ಮನಿಯ ಹಬ್ಬದ ಸಂಭ್ರಮ ವೇಳೆ ಚೂರಿ ದಾಳಿ: ಮೂವರು ಮೃತ್ಯು, ಹಲವರಿಗೆ ಗಾಯ

Update: 2024-08-24 03:15 GMT

PC: x.com/ajjumewati2

ಸೊಲಿಂಜೆನ್: ಜರ್ಮನಿಯ ಸೊಲಿಂಜೆನ್ ನಲ್ಲಿ ಹಬ್ಬದ ವೇಳೆ ನಡೆದ ಚೂರಿ ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದು, ಇತರ ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದ್ದು, ಫ್ರೋನೋಫ್ ನ ಸೆಂಟ್ರಲ್ ಸ್ಕ್ವೇರ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಜನರ ಮೇಲೆ ಚಾಕುವಿನಿಂದ ಇರಿಯುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಒಬ್ಬನೇ ವ್ಯಕ್ತಿ ಈ ದಾಳಿ ನಡೆಸಿದ್ದು, ತಕ್ಷಣವೇ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಹಾಗೂ ಇದುವರೆಗೆ ಆತನ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಸಂಭ್ರಮವನ್ನು ಆಯೋಜಿಸಿದ್ದ ಸಂಯೋಜಕರಲ್ಲೊಬ್ಬರಾದ ಫಿಲಿಪ್ ಮುಲ್ಲರ್, ಸಭೆಯನ್ನುದ್ದೇಶಿಸಿ ಮಾತನಾಡಿ, "ಸಮಾಧಾನದಿಂದ ಇರಿ; ದಯವಿಟ್ಟು ನಿಮ್ಮ ದೃಷ್ಟಿ ತೆರೆದಿರಲಿ; ಏಕೆಂದರೆ ದಾಳಿಕೋರನನ್ನು ದುರಾದೃಷ್ಟವಶಾತ್ ಇನ್ನೂ ಹಿಡಿದಿಲ್ಲ" ಎಂದು ಹೇಳಿದರು. ಹಲವು ಮಂದಿಗೆ ಒಬ್ಬ ಚಾಕುಧಾರಿ ನಡೆಸಿದ ದಾಳಿಯಲ್ಲಿ ಗಾಯಗಳಾಗಿವೆ ಎಂದು ವಿವರಿಸಿದರು.

ಒಂದು ಹೆಲಿಕಾಪ್ಟರ್ ಮತ್ತು ಹಲವು ಪೊಲೀಸ್ ಮತ್ತು ತುರ್ತು ವಾಹನಗಳು ತುರ್ತು ಸ್ಪಂದನಾ ಕಾರ್ಯಾಚರಣೆ ನಡೆಸಿವೆ. ಈ ಭಾಗದ ಪ್ರಮುಖ ರಸ್ತೆಗಳನ್ನು ಸುತ್ತುವರಿಯಲಾಗಿದೆ. ಘಟನೆಯಲ್ಲಿ ಐದು- ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News