ಇರಾನ್ ಮೇಲೆ ಪಾಕ್ ಪ್ರತಿದಾಳಿ: 3 ಮಹಿಳೆಯರು, 4 ಮಕ್ಕಳು ಬಲಿ
ಇಸ್ಲಾಮಾಬಾದ್: ಇರಾನ್‌ನ ಆಗ್ನೇಯ ಗಡಿ ಭಾಗದಲ್ಲಿ ಪಾಕಿಸ್ತಾನ ಗುರುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕ್ಷಿಪಣಿಗಳಿಂದ ಇರಾನ್‌ನ ಗಡಿ ಭಾಗದ ಗ್ರಾಮದ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ. ಸಂಘಟಿತ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಪಾಕಿಸ್ತಾನವು ಇಂದು ಮುಂಜಾನೆ ಇರಾನ್‌ನ ಸೀಸ್ತನ್-ಒ-ಬಲೂಚಿಸ್ತಾನ್ ಪ್ರಾಂತ್ಯದ ಉಗ್ರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ, ಹಲವಾರು ಉಗ್ರರು ಮೃತಪಟ್ಟಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಈ ಗುಪ್ತಚರ ಆಧರಿತ ಕಾರ್ಯಾಚರಣೆಗೆ ʼಮಾರ್ಗ್ ಬರ್ ಸರ್ಮಚರ್ʼ ಎಂಬ ಕೋಡ್ ನೀಡಲಾಗಿತ್ತು.
ಇರಾನ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದ ಬಲೂಚಿಸ್ತಾನದ ಮೇಲೆ ಮಂಗಳವಾರ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ನಂತರದ ಬೆಳವಣಿಗೆ ಇದಾಗಿದೆ.
ಪಾಕ್ ನಡೆಸಿದ ದಾಳಿಯಲ್ಲಿ ಇರಾನ್‌ನ ಸರವನ್ ನಗರದ ಸಮೀಪ ಸ್ಫೋಟ ಸಂಭವಿಸಿದರೂ ಸಾವು ನೋವುಗಳುಂಟಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ವಿರುದ್ಧದ ಕ್ರಮವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸಮರ್ಥಿಸಿಕೊಂಡಿದೆ ಹಾಗೂ ಹಲವು ವರ್ಷಗಳಿಂದ ಪಾಕ್ ಮೂಲದ ಉಗ್ರರು ಇರಾನ್‌ನಲ್ಲಿ ಸುರಕ್ಷಿತ ನೆಲೆ ಕಂಡುಕೊಂಡಿರುವ ಬಗ್ಗೆ ದೇಶ ಆತಂಕ ತೋಡಿಕೊಂಡಿತ್ತು ಎಂದು ಹೇಳಿದೆ.