ಭಾರತ, ಪಾಕ್ ಸೇರಿದಂತೆ ಹಲವು ದೇಶಗಳ ವಲಸಿಗರಿದ್ದ ಟ್ರಕ್ ಮೇಲೆ ಮೆಕ್ಸಿಕೋ ಸೈನಿಕರಿಂದ ಗುಂಡಿನ ದಾಳಿ; 6 ಮಂದಿ ಮೃತ್ಯು

Update: 2024-10-03 10:10 GMT

Photo:X/@RT_India_news

ಮೆಕ್ಸಿಕೋ: ಭಾರತ, ಪಾಕಿಸ್ತಾನ, ನೇಪಾಳ ಸೇರಿದಂತೆ ಹಲವು ದೇಶಗಳ ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್ ಮೇಲೆ ಗ್ವಾಟೆಮಾಲಾ ಗಡಿಯ ಬಳಿ ಮೆಕ್ಸಿಕೋ ಸೈನಿಕರು ಗುಂಡು ಹಾರಿಸಿದ್ದು, ಆರು ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕೋದ ರಕ್ಷಣಾ ಇಲಾಖೆ ತಿಳಿಸಿದೆ.

ವಲಸಿಗರಿದ್ದ ಟ್ರಕ್ ಹುಯಿಕ್ಸ್ಟ್ಲಾ ಬಳಿಯ ಚಿಯಾಪಾಸ್ ಗೆ ಸಮೀಪಿಸುತ್ತಿದ್ದಂತೆ ಇಬ್ಬರು ಸೈನಿಕರು ಟ್ರಕ್ ಮೇಲೆ ಗುಂಡು ಹಾರಿಸಿದ್ದು, ನಾಲ್ವರು ವಲಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಮತ್ತಿಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಟ್ರಕ್ ನಲ್ಲಿ ಒಟ್ಟು 33 ವಲಸಿಗರಿದ್ದು, ಇತರ 17 ವಲಸಿಗರಿಗೆ ಯಾವುದೇ ಗಾಯಗಳಾಗಿಲ್ಲ. ಈ ಪ್ರದೇಶವು ಕಳ್ಳಸಾಗಣೆಗೆ ಹೆಸರು ವಾಸಿಯಾದ ಮಾರ್ಗವಾಗಿದೆ. ಟ್ರಕ್ ಮೇಲೆ ಗುಂಡು ಹಾರಿಸಿದ ಇಬ್ಬರು ಸೈನಿಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಮತ್ತು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೆಕ್ಸಿಕೋದ ರಕ್ಷಣಾ ಇಲಾಖೆ ತಿಳಿಸಿದೆ.

ಈ ಪ್ರದೇಶದಲ್ಲಿ ವಲಸಿಗರನ್ನು ಸಾಗಿಸುವ ವಾಹನಗಳ ಮೇಲೆ ಮೆಕ್ಸಿಕೋ ಪಡೆಗಳು ಗುಂಡು ಹಾರಿಸುವುದು ಇದೇ ಮೊದಲಲ್ಲ, ಈ ಮೊದಲು ಕೂಡ ಹಲವು ಬಾರಿ ವಲಸಿಗರ ಮೇಲೆ ದಾಳಿ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News