ಪ್ರಚಾರ ನಿರ್ವಾಹಕಿಯನ್ನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥೆಯಾಗಿ ನೇಮಕ ಮಾಡಿದ ಟ್ರಂಪ್!
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರ ತಂತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ ಇಬ್ಬರ ಪೈಕಿ ಸೂಸಿ ವಿಲ್ಸ್ ಅವರನ್ನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಪಾತ್ರವನ್ನು ನಿಭಾಯಿಸುವ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ವಿಲ್ಸ್ ಪಾತ್ರರಾಗಲಿದ್ದಾರೆ.
2025ರ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಟ್ರಂಪ್ ಇದಕ್ಕೆ ಪೂರ್ವಭಾವಿಯಾಗಿ ಉನ್ನತ ಅಧಿಕಾರಿಗಳನ್ನು ನಿಯೋಜಿಸುವ ಸರಣಿ ಘೋಷಣೆಗಳಲ್ಲಿ ಇದು ಮೊದಲನೆಯದು.
ಅಮೆರಿಕದ ಉಪಾಧ್ಯಕ್ಷರಾಗಿ ಅಯ್ಕೆಯಾಗಿರುವ ಜೆ.ಡಿ. ವ್ಯಾನ್ಸ್ ಈ ಆಯ್ಕೆಯನ್ನು ದೃಢಪಡಿಸಿದ್ದಾರೆ. "ಅಮೆರಿಕದ 45 ಮತ್ತು 47ನೇ ಅಧ್ಯಕ್ಷರಾದ ಡೊನಾಲ್ಡ್ ಜೆ.ಟ್ರಂಪ್ ಅವರು, 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಪ್ರಚಾರ ವ್ಯವಸ್ಥಾಪಕಿ ಸೂಸನ್ ಸುಮೆರಲ್ ವೈಲ್ಸ್ ಅವರನ್ನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಘೋಷಿಸಿದ್ದಾರೆ" ಎಂದು ವ್ಯಾನ್ಸ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಸೂಸಿ ಕಠಿಣ, ಸ್ಮಾರ್ಟ್, ವಿನೂತನ ಮತ್ತು ಸಾರ್ವತ್ರಿಕ ಶ್ಲಾಘನೆ ಮತ್ತು ಗೌರವವನ್ನು ಹೊಂದಿರುವವರು. ಅಮೆರಿಕವನ್ನು ಶ್ರೇಷ್ಠ ಅಮೆರಿಕವಾಗಿ ಮಾಡುವ ನಿಟ್ಟಿನಲ್ಲಿ ಸೂಸಿ ಅವಿತರ ಕಾರ್ಯವನ್ನು ಮುಂದುವರಿಸಲಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಈ ಪಾತ್ರವನ್ನು ನಿಭಾಯಿಸುವ ಮೊಟ್ಟಮೊದಲ ಮಹಿಳೆಯಾದ ಸೂಸಿ ಈ ಗೌರವಕ್ಕೆ ಅರ್ಹರು. ಇಡೀ ದೇಶವೇ ಹೆಮ್ಮೆಪಡುವಂತೆ ಮಾಡುವಲ್ಲಿ ಯಾವುದೇ ಸಂದೇಹವಿಲ್ಲ " ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.