ಅಧ್ಯಕ್ಷರಾಗಿದ್ದಾಗ ಟ್ರಂಪ್ ರಿಂದ ಅಧಿಕಾರ ದುರುಪಯೋಗ; ವಿದೇಶಿ ಸರಕಾರಗಳಿಂದ 7.8 ದಶಲಕ್ಷ ಡಾಲರ್ ಆದಾಯ

Update: 2024-01-05 17:46 GMT

Photo: PTI

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರಾವಧಿಯಲ್ಲಿ ಸಾಂವಿಧಾನಿಕ ನಿಷೇಧವನ್ನು ಉಲ್ಲಂಘಿಸಿ ಚೀನಾ ಸಹಿತ ಹಲವು ವಿದೇಶಿ ಸರಕಾರಗಳ ಮೂಲಕ ತನ್ನ ಮಾಲಕತ್ವದ ಸಂಸ್ಥೆಗಳಿಗೆ ಕನಿಷ್ಟ 7.8 ದಶಲಕ್ಷ ಡಾಲರ್ ಆದಾಯ ಪಡೆದಿದ್ದರು ಎಂದು ಅಮೆರಿಕದ ಸಂಸತ್ ಸಮಿತಿಯ ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಟ್ರಂಪ್ ಅಧ್ಯಕ್ಷರಾಗಿದ್ದಾಗ ಅವರ ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸೌದಿ ಅರೆಬಿಯಾ, ಟರ್ಕಿ, ಕಾಂಗೊ ಗಣರಾಜ್ಯ, ಚೀನಾ ಸೇರಿದಂತೆ ಸುಮಾರು 20 ದೇಶಗಳು ಆರ್ಥಿಕ ನೆರವು ಒದಗಿಸಿವೆ ಎಂದು `ಗೃಹ ಉಸ್ತುವಾರಿ ಸಮಿತಿ' ಗುರುವಾರ ಸಲ್ಲಿಸಿರುವ `ಶ್ವೇತಭವನ ಮಾರಾಟಕ್ಕಿದೆ' ಎಂಬ ಶೀರ್ಷಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಾಗರೋತ್ತರ ಸರಕಾರಗಳಿಂದ ಈ ರೀತಿಯ ಆದಾಯಗಳು `ವಿದೇಶಿ ವರಮಾನಗಳ ಮೇಲಿನ ಸಾಂವಿಧಾನಿಕ ನಿಷೇಧವನ್ನು' ಉಲ್ಲಂಘಿಸಿದೆ. ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ವಿದೇಶಿ ಸರಕಾರ ಹಾಗೂ ಅದರ ಮುಖಂಡರಿಂದ(ಇದರಲ್ಲಿ ವಿಶ್ವದ ಕೆಲವು ಅಹಿತಕರ ಆಡಳಿತಗಳು ಸೇರಿವೆ) 7.8 ದಶಲಕ್ಷ ಡಾಲರ್ಗೂ ಅಧಿಕ ಪಾವತಿಗಳನ್ನು ಸ್ವೀಕರಿಸಿದ್ದಾರೆ. ಕೇವಲ 2 ವರ್ಷದ ಆಡಳಿತಾವಧಿಯಲ್ಲೇ ವಿಶ್ವದ 190ಕ್ಕೂ ಅಧಿಕ ದೇಶಗಳ ಪೈಕಿ ಸುಮಾರು 20 ದೇಶಗಳಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಮಾಲಕತ್ವದ 500ಕ್ಕೂ ಅಧಿಕ ಸಂಸ್ಥೆಗಳಲ್ಲಿ ಕೇವಲ 4 ಸಂಸ್ಥೆಗಳಿಗೆ ಸಂದ ವರಮಾನದ ಬಗ್ಗೆ ನಮಗೆ ತಿಳಿದುಬಂದಿದೆ ಎಂದು ವರದಿ ಹೇಳಿದೆ.

ಟ್ರಂಪ್ ಅವರ ಲೆಕ್ಕಪತ್ರ ವ್ಯವಸ್ಥಾಪಕರು ಒದಗಿಸಿದ ಸೀಮಿತ ಮಾಹಿತಿ ಮತ್ತು ಅಮೆರಿಕದ ಹಣಕಾಸು ನಿಯಂತ್ರಣ ಪ್ರಾಧಿಕಾರ ಎಸ್ಇಸಿಗೆ ಸಲ್ಲಿಸಿದ ದಾಖಲೆಗಳನ್ನು ಆಧರಿಸಿರುವುದರಿಂದ ಪೂರ್ಣ ಮೊತ್ತವು ಹೆಚ್ಚಿರಬಹುದು. ತನಗೆ ಅನುಕೂಲಕರವಾದ ಕರಾರುಗಳ ಪ್ರಕಾರ ಸೌದಿ ಅರೆಬಿಯಾ ಜತೆ ವ್ಯವಹಾರ ನಡೆಸಲು ಟ್ರಂಪ್ ನಿರಂತರ ಇಚ್ಚೆ ವ್ಯಕ್ತಪಡಿಸುತ್ತಿದ್ದರು ಎಂದು ವರದಿ ಹೇಳಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳಲು ಮುಂಚೂಣಿಯಲ್ಲಿರುವ ಟ್ರಂಪ್ ಮೋಸದಿಂದ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರದ ಮೌಲ್ಯ ಹೆಚ್ಚಿಸಿಕೊಂಡ ಆರೋಪದಲ್ಲಿ `ನಾಗರಿಕ ವಂಚನೆ ಪ್ರಕರಣ'ದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಚೀನಾ ನಿಯೋಗದ ವೆಚ್ಚ :

2017ರ ಆಗಸ್ಟ್ 27ರಂದು ಚೀನಾ ರಾಯಭಾರಿ ಕಚೇರಿಯ ನಿಯೋಗವು ವಾಷಿಂಗ್ಟನ್ನಲ್ಲಿ ಟ್ರಂಪ್ ಮಾಲಕತ್ವದ `ಟ್ರಂಪ್ ಇಂಟರ್ನ್ಯಾಷನಲ್ ಹೋಟೆಲ್'ನಲ್ಲಿ 19,391 ಡಾಲರ್ ವೆಚ್ಚ ಮಾಡಿದೆ. ಚೀನಾ ಸರಕಾರ, ಚೀನಾದ ಐಸಿಬಿಸಿ ಬ್ಯಾಂಕ್ ಮತ್ತು ಹೈನಾನ್ ಏರ್ಲೈನ್ಸ್ ಸಂಸ್ಥೆಗಳು ಟ್ರಂಪ್ ಮಾಲಕತ್ವದ ಸಂಸ್ಥೆಗಳ ಪರವಾಗಿ 5.5 ದಶಲಕ್ಷ ಡಾಲರ್ ವೆಚ್ಚ ಮಾಡಿವೆ. ಸಂಸತ್ತಿನ ಅನುಮತಿ ಪಡೆಯದೆ ತನ್ನ ಸಂಸ್ಥೆಗಳ ಪರವಾಗಿ ಚೀನಾದಿಂದ ಆದಾಯ ಪಡೆಯುವ ಮೂಲಕ ಮಾಜಿ ಅಧ್ಯಕ್ಷ ಟ್ರಂಪ್ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News