ದೋಣಿ ಮುಳುಗಿ ಇಬ್ಬರು ವಲಸಿಗರ ಮೃತ್ಯು ; 30 ಜನರ ರಕ್ಷಣೆ
Update: 2024-08-04 17:20 GMT
ರೋಮ್ : ಸಿಸಿಲಿಯ ಪೂರ್ವ ಕರಾವಳಿಯ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ ವಲಸಿಗರಿದ್ದ ದೋಣಿ ಮುಳುಗಿದ್ದು ದೋಣಿಯಲ್ಲಿದ್ದ 32 ಮಂದಿಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರು ವಲಸಿಗರು ಮೃತಪಟ್ಟಿದ್ದಾರೆ. ಉಳಿದ 30 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಟಲಿಯ ಕರಾವಳಿ ರಕ್ಷಣಾ ಪಡೆ ರವಿವಾರ ಹೇಳಿದೆ.
ಸಿರಾಕ್ಯೂಸ್ ನಗರದ ಆಗ್ನೇಯಕ್ಕೆ ಸುಮಾರು 17 ಮೈಲು ದೂರದಲ್ಲಿ ದೋಣಿಯೊಂದು ಅತಂತ್ರ ಸ್ಥಿತಿಯಲ್ಲಿರುವ ಬಗ್ಗೆ ದೊರೆತ ಮಾಹಿತಿಯಂತೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ದೋಣಿಯಲ್ಲಿ ಸಿರಿಯಾ, ಈಜಿಪ್ಟ್ ಮತ್ತು ಬಾಂಗ್ಲಾದೇಶದ ವಲಸಿಗರಿದ್ದರು. ಗಸ್ತು ದೋಣಿ ಮತ್ತು ವಿಮಾನವನ್ನು ಸ್ಥಳಕ್ಕೆ ರವಾನಿಸಿದ್ದು ಅಷ್ಟರಲ್ಲೇ ದೋಣಿ ಮುಳುಗಲಾರಂಭಿಸಿದೆ. ದೋಣಿಯಲ್ಲಿದ್ದ ಎಲ್ಲಾ 32 ವಲಸಿಗರನ್ನೂ ರಕ್ಷಿಸಲಾಗಿದ್ದರೂ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.