ಪಾಕಿಸ್ತಾನ: ಭಯೋತ್ಪಾದಕರ ದಾಳಿ; ಮೂರು ಪೊಲೀಸ್ ಅಧಿಕಾರಿಗಳ ಮೃತ್ಯು
ಲಾಹೋರ್: ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಡೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಶುಕ್ರವಾರ ಅಫ್ಘಾನಿಸ್ತಾನದ ಗಡಿ ಬಳಿ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನದ ಮೂವರು ಪೊಲೀಸ್ ಅಧಿಕಾರಿಗಳು ಮೃತರಾಗಿದ್ದಾರೆ. ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಮೂವರು ಭಯೋತ್ಪಾದಕರೂ ಹತರಾಗಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಠಾಣೆಯ ಪ್ರವೇಶದ್ವಾರದ ಬಳಿಯಲ್ಲಿ ಓರ್ವ ಭಯೋತ್ಪಾದಕ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಆಗ ಇತರ ಕೆಲವರು ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು ಮೂವರು ಅಧಿಕಾರಿಗಳು ಮೃತಪಟ್ಟು ಇತರ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಪೊಲೀಸರ ಪ್ರತಿದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು ಗಾಯಗೊಂಡ ಇಬ್ಬರ ಸಹಿತ ಉಳಿದವರು ಅಲ್ಲಿಂದ ಪರಾರಿಯಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಇಫ್ತಿಕಾರ್ ಶಾ ಹೇಳಿದ್ದಾರೆ.
ಅನ್ಸಾರುಲ್ ಇಸ್ಲಾಮ್ ಎಂಬ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ವಹಿಸಿಕೊಂಡಿದ್ದು ಇದು ತಮ್ಮ ಪ್ರಥಮ ದಾಳಿಯಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಇನ್ನಷ್ಟು ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.