ಚೀನಾಕ್ಕೆ ಅಪ್ಪಳಿಸಿದ ಗೆಮಿ ಚಂಡಮಾರುತ | 3 ಲಕ್ಷ ಮಂದಿಯ ಸ್ಥಳಾಂತರ; ವ್ಯಾಪಕ ನಾಶ-ನಷ್ಟ

Update: 2024-07-26 17:28 GMT

 ಸಾಂದರ್ಭಿಕ ಚಿತ್ರ | PC : DDnews

ಬೀಜಿಂಗ್ : ಚೀನಾಕ್ಕೆ ಶುಕ್ರವಾರ ಅಪ್ಪಳಿಸಿದ ಗೆಮಿ ಚಂಡಮಾರುತದಿಂದ ಪೂರ್ವ ಚೀನಾದಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಂಡಮಾರುತ ಗುರುವಾರ ರಾತ್ರಿ ವೇಳೆ ಪೂರ್ವ ಚೀನಾದ ಫುಜಿಯಾನ್ ಪ್ರಾಂತ ತಲುಪಿದೆ. ಸುಂಟರಗಾಳಿ ಮತ್ತು ಮಳೆಯಿಂದಾಗಿ ಫುಜಿಯಾನ್ ಪ್ರಾಂತದಲ್ಲೇ 2,90,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಿದ್ದು, ಕೆಲವು ನಗರಗಳಲ್ಲಿ ಸಾರ್ವಜನಿಕ ಸಾರಿಗೆ, ಕಚೇರಿಗಳು, ಶಾಲೆಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ನೆರೆಯ ಝೆಜಿಯಾಂಗ್ ಪ್ರಾಂತದಲ್ಲಿ ರಸ್ತೆಗಳಲ್ಲಿ ನೆರೆನೀರು ಹರಿಯುತ್ತಿದ್ದು ಹಲವು ಮರಗಳು ರಸ್ತೆಗಳ ಮೇಲೆ ಉರುಳಿಬಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ವೆನ್‌ಝೋವ್ ನಗರದಲ್ಲಿ ಸುಮಾರು 7 ಸಾವಿರ ಜನರನ್ನು ಸ್ಥಳಾಂತರಿಸಲಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಯಾಂಗ್‌ಕ್ಸಿ ಮತ್ತು ಹೆನಾನ್ ಪ್ರಾಂತದಲ್ಲೂ ಧಾರಾಕಾರ ಮಳೆಯಾಗಿದೆ ಎಂದು ಸಿಸಿಟಿವಿ ವರದಿ ಮಾಡಿದೆ.

ಗ್ವಾಂಗ್‌ಡಾಂಗ್ ಪ್ರಾಂತದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಕೆಲವು ಪ್ರಯಾಣಿಕರ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇದುವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಚೀನಾದ ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News