ರಶ್ಯದ ಕುರ್ಸ್ಕ್ ಪ್ರಾಂತಕ್ಕೆ ಉಕ್ರೇನ್ ಲಗ್ಗೆ | 1 ಸಾವಿರಕ್ಕೂ ಅಧಿಕ ಸೇನಾಪಡೆಗಳ ನಿಯೋಜನೆ ; ರಶ್ಯಕ್ಕೆ ಹಿನ್ನಡೆ
ಕೀವ್ : ಉಕ್ರೇನಿಯನ್ ಪಡೆಗಳು ರಶ್ಯದ ನೈಋತ್ಯ ಕುರ್ಸ್ಕ್ ಪ್ರಾಂತ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು, 1 ಸಾವಿರಕ್ಕೂ ಅಧಿಕ ಸೇನಾಪಡೆಗಳನ್ನು ಮತ್ತು 12ಕ್ಕೂ ಅಧಿಕ ಕವಚಾವೃತ ವಾಹನಗಳನ್ನು ಹಾಗೂ ಟ್ಯಾಂಕ್ಗಳನ್ನು ನಿಯೋಜಿಸಿದೆ. ಆದರೆ ಈ ಕಾರ್ಯಾಚರಣೆಯ ಬಗ್ಗೆ ಕೀವ್ ಅಧಿಕೃತ ಹೇಳಿಕೆಯನ್ನು ನೀಡಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯ ಉನ್ನತ ಸೇನಾ ಜನರಲ್ ಒಬ್ಬರು, ಉಕ್ರೇನ್ ಸೇನೆಯ ಒಳನುಸುಳುವಿಕೆಯನ್ನು ಹತ್ತಿಕ್ಕುವುದಾಗಿ ಹಾಗೂ ಹೋರಾಟಗಾರರನ್ನು ಗಡಿಯಾಚೆಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಶ್ಯದ ಕುರ್ಸ್ಕ್ ಒಬ್ಲಾಸ್ಟ್ನೊಳಗೆ 10 ಕಿ.ಮೀ.ವರೆಗೆ ಮುನ್ನಡೆ ಸಾಧಿಸಿರುವುದನ್ನು ಉಕ್ರೇನ್ ಪಡೆಗಳು ದೃಢಪಡಿಸಿವೆ.ರಶ್ಯದ ಪ್ರಾಂತದ ಮೇಲೆ ದಾಳಿ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಅಮೆರಿಕ ಮೂಲದ ಯುದ್ದ ಅಧ್ಯಯನ ಸಂಸ್ಥೆ ತಿಳಿಸಿದೆ.
ಉಕ್ರೇನಿಯನ್ಪಡೆಗಳು ರಶ್ಯಕ್ಕೆ ಸೇರಿದ ಎರಡು ರಕ್ಷಣಾತ್ಮಕ ಗಡಿರೇಖೆಗಳು ಹಾಗೂ ಒಂದು ಭದ್ರಕೋಟೆಯೊಳಗೆ ನುಸುಳುವಲ್ಲಿ ಯಶಸ್ವಿಯಾಗಿರುವುದನ್ನು ಸೂಚಿಸುತ್ತದೆ ಎಂದರು.
ಉಕ್ರೇನ್ ಗಡಿಯಿಂದ ಎಂಟು ಕಿ.ಮೀ. ದೂರದ ಆಯಕಟ್ಟಿನ ರಶ್ಯನ್ ಪಟ್ಟಣ ಸುಡ್ಝಾವನ್ನು ಗುರಿಯಿರಿಸಿ ಈ ಮುನ್ನಡೆಯನ್ನು ಸಾಧಿಸಲಾಗಿದೆ ಎಂದು ತಿಳಿದುಬಂದಿದೆ.