ಉಕ್ರೇನ್ ಯುದ್ಧ | ಕುರಾಖೋವ್ ನಗರವನ್ನು ಸುತ್ತುವರಿದ ರಶ್ಯನ್ ಪಡೆಗಳು ; ಭೀಕರ ಸಂಘರ್ಷದ ಸಾಧ್ಯತೆ

Update: 2024-11-10 17:03 GMT

ಸಾಂದರ್ಭಿಕ ಚಿತ್ರ

ಉಕ್ರೇನ್ : ಯುದ್ಧಪೀಡಿತ ಉಕ್ರೇನ್‌ ನ ಪೂರ್ವ ಗಡಿ ಮುಂಚೂಣಿಯಲ್ಲಿರುವ ಕುರಾಖೋವ್ ನಗರವನ್ನು ಮೂರು ಕಡೆಗಳಿಂದಲೂ ರಶ್ಯನ್ ಪಡೆಗಳು ಸುತ್ತುವರಿದಿದ್ದು, ಭಗ್ನಗೊಂಡಿರುವ ನಗರದ ಮಧ್ಯಭಾಗದಿಂದ ಕೇವಲ 3 ಕಿ.ಮೀ. ದೂರದಲ್ಲಿವೆ. ಉಕ್ರೇನ್ ಪಡೆಗಳು ಆಕ್ರಮಣಕಾರಿ ರಶ್ಯನ್ ಪಡೆಗಳ ಮೇಲೆ ಭೀಕರ ದಾಳಿಯನ್ನು ಡೆಸುವ ಸಾಧ್ಯತೆ ಇದೆಯೆನ್ನಲಾಗಿದೆ.

ಆದಾಗ್ಯೂ ನಗರದಲ್ಲಿ ಇನ್ನೂ 700ರಿಂದ 1 ಸಾವಿರದಷ್ಟು ನಿವಾಸಿಗಳು ಉಳಿದುಕೊಂಡಿದ್ದು, ಅವರಲ್ಲಿ ಹೆಚ್ಚಿನವರು ಅಪಾರ್ಟ್‌ಮೆಂಟ್ ಕಟ್ಟಡಗಳ ತಳ ಅಂತಸ್ತಿನಲ್ಲಿ ವಾಸವಾಗಿದ್ದು ನೀರು, ವಿದ್ಯುತ್ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.

ರಶ್ಯನ್ ಪಡೆಗಳು ನಿರಂತರವಾದ ಫಿರಂಗಿ, ರಾಕೆಟ್ ಲಾಂಚರ್‌ ಗಳು, ವೈಮಾನಿಕ ಬಾಂಬ್‌ಗಳು ಹಾಗೂ ಡ್ರೋನ್‌ ಗಳ ಮೂಲಕ ಕುರಾಖೋವ್ ಮೇಲೆ ಪ್ರಹಾರ ನಡೆಸುತ್ತಿವೆ. ಡೊನ್‌ಬಾಸ್ ಪ್ರಾಂತದ ಪಶ್ಚಿಮಾಭಿಮುಖವಾದ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಅದು ಮುಂದುವರಿಸಿದೆ. ಕುರಾಖೋವ್‌ ನಲ್ಲಿ ಯುದ್ಧ ಸನ್ನಿವೇಶವು ಅತ್ಯಂತ ಸವಾಲುದಾಯಕವಾಗಿದೆಯೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸ್ವತಃ ಒಪ್ಪಿಕೊಂಡಿದ್ದಾರೆ.

ರಶ್ಯನ್ ಸೇನೆಯ ದಾಳಿಯಿಂದಾಗಿ ನಗರದ ಆಸ್ಪತ್ರೆಗಳು, ಶಿಶುವಿಹಾರಗಳು, ಜಲಸಂಸ್ಕರಣ ಘಟಕ, ನಿರಾಶ್ರಿತರ ಕೇಂದ್ರ, ಅಂಚೆ ಕಚೇರಿ, ಸಾಂಸ್ಕೃತಿಕ ಕೇಂದ್ರಗಳೆಲ್ಲವೂ ನಾಶವಾಗಿದ್ದು, ಬಾಂಬ್ ದಾಳಿಗೆ ಅಹುತಿಯಾದ ಕಟ್ಟಡಗಳ ಅವಶೇಷಗಳಿಂದ ಹೊಗೆ ಅಗಸದೆತ್ತರಕ್ಕೆ ವ್ಯಾಪಿಸಿರುವ ನೋಟವು ಸಾಮಾನ್ಯವಾಗಿದೆಯೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News