ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಿ : ವಿಶ್ವಸಂಸ್ಥೆ, ಲೆಬನಾನ್ ಪ್ರಧಾನಿ ಆಗ್ರಹ
ವಿಶ್ವಸಂಸ್ಥೆ : ಪಶ್ಚಿಮ ಏಶ್ಯಾದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಿಯೆಗಳಿಂದ ದೂರ ಇರುವಂತೆ ವಿಶ್ವಸಂಸ್ಥೆ ಮತ್ತು ಲೆಬನಾನ್ ಪ್ರಧಾನಿ ರವಿವಾರ ಆಗ್ರಹಿಸಿದ್ದಾರೆ.
ರವಿವಾರ ಬೆಳಿಗ್ಗೆ ಲೆಬನಾನ್‍ನ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್‍ನ ವೈಮಾನಿಕ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇಸ್ರೇಲ್‍ನ ಪ್ರದೇಶಗಳ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ ನಡೆದ ಬಳಿಕ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಈ ಬೆಳವಣಿಗೆ ಅತ್ಯಂತ ಕಳವಳಕಾರಿಯಾಗಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಿಸುವ ಕ್ರಿಯೆಗಳಿಂದ ದೂರ ಇರುವಂತೆ ಮತ್ತು ತಕ್ಷಣ ಕದನ ವಿರಾಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು 'ಲೆಬನಾನ್‍ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಸಂಯೋಜಕರ ಕಚೇರಿ' ಮತ್ತು ಲೆಬನಾನ್‍ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ(ಯುಎನ್‍ಐಎಫ್‍ಐಎಲ್) ಕರೆ ನೀಡಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 1701ರ ಅನುಷ್ಠಾನದ ನಂತರ ಯುದ್ಧದ ನಿಲುಗಡೆಗೆ ಮರಳುವುದು ಈಗ ನಮ್ಮೆದುರು ಇರುವ ಏಕೈಕ ಸುಸ್ಥಿರ ಮಾರ್ಗವಾಗಿದೆ' ಎಂದು ಹೇಳಿಕೆ ತಿಳಿಸಿದೆ.
ಈ ನಿರ್ಣಯವು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ 2006ರ ಸಂಘರ್ಷವನ್ನು ಅಂತ್ಯಗೊಳಿಸಿತ್ತು ಮತ್ತು ಲೆಬನಾನ್ ಸೇನೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲಕರು ಮಾತ್ರ ದಕ್ಷಿಣ ಲೆಬನಾನ್‍ನಲ್ಲಿ ನಿಯೋಜಿಸಲಾಗುವ ಸಶಸ್ತ್ರ ಪಡೆಗಳಾಗಿರಬೇಕು ಎಂದು ನಿರ್ಣಯಿಸಿತ್ತು.
ರವಿವಾರ ಸಚಿವ ಸಂಪುಟದ ತುರ್ತು ಸಭೆ ನಡೆಸಿದ ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ, ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಲೆಬನಾನ್‍ನ ಮಿತ್ರರ ಜತೆ ಸರಣಿ ಮಾತುಕತೆ ನಡೆಸಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ನಡೆಯುತ್ತಿರುವ ಅಂತರಾಷ್ಟ್ರೀಯ ಪ್ರಯತ್ನಗಳಿಗೆ ಲೆಬನಾನ್‍ನ ಬೆಂಬಲವನ್ನು ಅವರು ಪುನರುಚ್ಚರಿಸಿದರು.
`ಇಸ್ರೇಲ್‍ನ ಆಕ್ರಮಣವನ್ನು ಮೊದಲು ನಿಲ್ಲಿಸುವುದು, ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1701ನೇ ನಿರ್ಣಯವನ್ನು ಜಾರಿಗೊಳಿಸುವುದು ಈಗಿನ ಅಗತ್ಯವಾಗಿದೆ ಎಂದು ಪ್ರಧಾನಿಯ ಕಚೇರಿ ಹೇಳಿದೆ.