ಗಾಝಾ ಆಸ್ಪತ್ರೆ ಮೇಲಿನ ದಾಳಿ: ತುರ್ತು ಸಭೆ ಕರೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ : ಗಾಝಾ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಂತೆಯೇ ಬುಧವಾರ ತುರ್ತು ಸಭೆ ನಡೆಸುವುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.
ಗಾಝಾ ನಗರದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ಬಳಿಕ ತುರ್ತು ಸಭೆ ನಡೆಸುವಂತೆ ರಶ್ಯ ಮತ್ತು ಯುಎಇ ಆಗ್ರಹಿಸಿತ್ತು. ಸ್ಫೋಟದಲ್ಲಿ ಸುಮಾರು 500 ಫೆಲಸ್ತೀನೀಯರು ಮೃತಪಟ್ಟಿರುವುದಾಗಿ ಹಮಾಸ್ ಹೇಳಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದಾಗ ಇಸ್ರೇಲ್ ಬೆಂಬಲಿಸುವ ನಿಲುವು ತಳೆದಿದ್ದ ಯುಎಇ ಬಳಿಕ ಭದ್ರತಾ ಮಂಡಳಿಯಲ್ಲಿ ಅರಬ್ ಜಗತ್ತಿನ ಧ್ವನಿಯಾಗಿದೆ. ತಕ್ಷಣ ಯುದ್ಧವಿರಾಮ ಘೋಷಿಸಬೇಕೆಂಬ ನಿರ್ಣಯವನ್ನು ಭದ್ರತಾ ಮಂಡಳಿಯಲ್ಲಿ ರಶ್ಯ ಮಂಡಿಸಿದ್ದು ಅದನ್ನು ಯುಎಇ ಬೆಂಬಲಿಸಿದೆ. ನೂರಾರು ಜನರ ಸಾವು-ನೋವಿಗೆ ಕಾರಣವಾಗಿರುವ ಇಸ್ರೇಲ್ ದಾಳಿಯನ್ನು ಬಲವಾಗಿ ಖಂಡಿಸುವುದಾಗಿ ಮಂಗಳವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಯುಎಇ ಹೇಳಿದೆ.
ಆಸ್ಪತ್ರೆ ಮೇಲಿನ ದಾಳಿಗೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು:
* ಐಡಿಎಫ್ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದೆ ಎಂದು ಹಮಾಸ್ ಹಾಗೂ ಬಹುತೇಕ ಅರಬ್ ಜಗತ್ತು ಇಸ್ರೇಲನ್ನು ದೂಷಿಸಿದೆ.
* ಗಾಝಾ, ಇಸ್ರೇಲಿ ಮಕ್ಕಳ ಹತ್ಯೆಗೆ ಮಾತ್ರ ಜವಾಬ್ದಾರರಲ್ಲ, ಫೆಲೆಸ್ತೀನಿಯನ್ ಮಕ್ಕಳನ್ನೂ ಕೊಲೆ ಮಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.
* ನಾಗರಿಕರು ಮತ್ತು ವಿಶ್ವಸಂಸ್ಥೆ ಸಿಬಂದಿ ಉತ್ತರ ಗಾಝಾವನ್ನು ತೊರೆಯುವ ಆದೇಶವನ್ನು ಹಿಂಪಡೆಯುವ ಮಾನವೀಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ನಿರ್ಣಯವನ್ನು ಬ್ರೆಝಿಲ್ ಮಂಡಿಸಿದ್ದು ಬುಧವಾರದ ತುರ್ತು ಸಭೆಗೂ ಮುನ್ನ ಇದರ ಪರ ಮತದಾನ ನಡೆಯುತ್ತದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.
* ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಗುರುವಾರ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ರನ್ನು ಭೇಟಿಯಾಗಲಿದ್ದು ಗಾಝಾ ನಿರಾಶ್ರಿತರ ಬಗ್ಗೆ ಚರ್ಚಿಸಲಿದ್ದಾರೆ.
* ಆಸ್ಪತ್ರೆ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ಇಸ್ರೇಲ್ ಗೆ ರಶ್ಯ ಆಗ್ರಹ.