ಪರಮಾಣು ವಸ್ತುಗಳ ಕಳ್ಳತನ | ಜಾಗೃತೆ ವಹಿಸಲು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ ಆಗ್ರಹ

Update: 2024-05-20 14:53 GMT

Photo : Reuters

ವಿಯೆನ್ನಾ: ಪರಮಾಣು ಹಾಗೂ ಇತರ ವಿಕಿರಿಣಶೀಲ ವಸ್ತುಗಳ ಕಳ್ಳತನ ಮತ್ತು ಕಳ್ಳಸಾಗಣೆಯ ವಿರುದ್ಧ ಎಚ್ಚರಿಕೆ ವಹಿಸುವಂತೆ ವಿಶ್ವಸಂಸ್ಥೆಯ ಪರಮಾಣು ನಿಗಾ ಘಟಕ ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ) ಆಗ್ರಹಿಸಿದೆ.

ಕಳೆದ 30 ವರ್ಷಗಳಲ್ಲಿ 4,243 ಕಳವು ಪ್ರಕರಣ ದಾಖಲಾಗಿದ್ದು ಇದರಲ್ಲಿ 350 ಅಕ್ರಮ ಸಾಗಣೆ ಅಥವಾ ದುರುದ್ದೇಶಪೂರಿತ ಬಳಕೆಗೆ ಸಂಬಂಧಿಸಿವೆ . ಕಳೆದ ವರ್ಷ 31 ದೇಶಗಳು 168 ಪ್ರಕರಣಗಳನ್ನು ವರದಿ ಮಾಡಿದ್ದು ಇದರಲ್ಲಿ 6 ಸಾಗಣೆ ಅಥವಾ ದುರುದ್ದೇಶಪೂರಿತ ಬಳಕೆಗೆ ಸಂಬಂಧಿಸಿವೆ. ಪ್ರಕರಣಗಳ ಮರುಕಳಿಕೆಯು ವಿಕಿರಣಶೀಲ ವಸ್ತುಗಳನ್ನು ನಿಯಂತ್ರಿಸಲು, ಸುರಕ್ಷಿತಗೊಳಿಸಲು ಮತ್ತು ಸರಿಯಾಗಿ ವಿಲೇವಾರಿ ಮಾಡಲು ನಿಯಂತ್ರಣ ಮೇಲ್ವಿಚಾರಣೆ ಪ್ರಾಧಿಕಾರ ಜಾಗರೂಕತೆ ವಹಿಸುವ ಅಗತ್ಯವನ್ನು ಒತ್ತಿಹೇಳಿದೆ ಎಂದು ಐಎಇಎಯ ಪರಮಾಣು ಭದ್ರತಾ ವಿಭಾಗದ ನಿರ್ದೇಶಕಿ ಎಲೆನಾ ಬಗ್ಲೋವಾ ಹೇಳಿದ್ದಾರೆ. ಯುರೇನಿಯಂ, ಪ್ಲುಟೋರಿಯಂ ಮತ್ತು ಥೋರಿಯಂನಂತಹಪರಮಾಣು ವಸ್ತುಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಆದರೂ ಅಪಾಯಕಾರಿ ವಸ್ತುಗಳು ಸಾಗಾಟದ ಸಂದರ್ಭ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇರುವುದರಿಂದ ಸಾರಿಗೆ ಭದ್ರತಾ ಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ. ಪರಮಾಣು ಅಥವಾ ಇತರ ವಿಕಿರಣಶೀಲ ವಸ್ತುಗಳು ಕಳವಾಗಿರುವ, ಕಳೆದುಹೋಗಿರುವ ಅಥವಾ ಅಸಮರ್ಪಕ ವಿಲೇವಾರಿಯ ಪ್ರಕರಣವನ್ನು 145 ದೇಶಗಳು ವರದಿ ಮಾಡಿವೆ ಎಂದವರು ಹೇಳಿದ್ದಾರೆ.

ಆಸ್ಟ್ರೇಲಿಯಾದ ರಾಜಧಾನಿ ವಿಯೆನ್ನಾದಲ್ಲಿ ಆರಂಭಗೊಂಡಿರುವ 4ನೇ ಐಎಇಎ ಅಂತರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಈ ಕುರಿತ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ. ಹಲವು ವಿಕಿರಣಶೀಲ ವಸ್ತುಗಳನ್ನು ಆಸ್ಪತ್ರೆಗಳು, ವಿವಿಗಳು ಮತ್ತು ಪ್ರಪಂಚದಾದ್ಯಂತ ಉದ್ಯಮದಲ್ಲಿ ಬಳಸಲಾಗುತ್ತದೆ. ಇದು ಭಯೋತ್ಪಾದಕರ ಕೈ ಸೇರಿದರೆ `ಡರ್ಟಿ ಬಾಂಬ್'ಗಳಲ್ಲಿ ಇದನ್ನು ಬಳಸಬಹುದು ಎಂಬ ಆತಂಕವಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News