ಗಾಝಾದಲ್ಲಿ ಪೋಲಿಯೊ ಲಸಿಕೆ ಕೇಂದ್ರದ ಮೇಲಿನ ದಾಳಿಯಲ್ಲಿ 4 ಮಕ್ಕಳಿಗೆ ಗಾಯ : ವಿಶ್ವಸಂಸ್ಥೆ
ಜಿನೆವಾ : ಉತ್ತರ ಗಾಝಾದಲ್ಲಿ ಪೋಲಿಯೊ ಲಸಿಕೆ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ 4 ಮಕ್ಕಳ ಸಹಿತ 6 ಮಂದಿ ಗಾಯಗೊಂಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಲಸಿಕೆ ಹಾಕುವ ಅಭಿಯಾನ ನಡೆಸಲು ಒಪ್ಪಿಕೊಳ್ಳಲಾದ ಮಾನವೀಯ ಕದನ ನಿಲುಗಡೆ ಪ್ರದೇಶದಲ್ಲಿರುವ ಶೇಖ್ ರದ್ವಾನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಳಿ ನಡೆದಿರುವುದು ಮಕ್ಕಳ ಹೆತ್ತವರನ್ನು ಆತಂಕಕ್ಕೆ ದೂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಾಳಿ ನಡೆಯುವುದಕ್ಕೆ ಕೆಲ ಕ್ಷಣಗಳ ಮೊದಲು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಆ ಪ್ರದೇಶದಲ್ಲಿತ್ತು. ಮಾನವೀಯ ವಿರಾಮದ ಸಂದರ್ಭದಲ್ಲಿ ನಡೆದಿರುವ ಈ ದಾಳಿಯು ಮಕ್ಕಳ ಆರೋಗ್ಯ ರಕ್ಷಣೆಯ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ಲಸಿಕೆ ಹಾಕಿಸಲು ಕರೆತರುವುದನ್ನು ತಡೆಯಬಹುದು ಎಂದು ಘೆಬ್ರಯೇಸಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಗಾಝಾದಲ್ಲಿ 25 ವರ್ಷಗಳ ಬಳಿಕ ಮೊದಲ ಪೋಲಿಯೊ ಪ್ರಕರಣ ದೃಢಪಟ್ಟ ಬಳಿಕ ಸೆಪ್ಟಂಬರ್ 1ರಂದು ಪೋಲಿಯೊ ಲಸಿಕೆ ಅಭಿಯಾನದ ಪ್ರಥಮ ಹಂತ ಯಶಸ್ವಿಯಾಗಿ ನಡೆದಿತ್ತು. ಆದರೆ ನವೆಂಬರ್ 1ರಂದು ನಡೆಯುತ್ತಿದ್ದ ಎರಡನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಇಸ್ರೇಲ್ ಬಾಂಬ್ ದಾಳಿಯ ಬಳಿಕ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.