ಗಾಝಾದಲ್ಲಿ ಕ್ರೂರ ಕೃತ್ಯಗಳನ್ನು ಎಸಗಲು ಇಸ್ರೇಲ್‌ಗೆ ಅಮೆರಿಕ ಕುಮ್ಮಕ್ಕು; ಇರಾನ್ ಆರೋಪ
ಟೆಹರಾನ್: ಗಾಝಾಪಟ್ಟಿಯಲ್ಲಿ ಫೆಲೆಸ್ತೀನಿಯರನ್ನು ಹತ್ಯೆಗೈಯಲು ಹಾಗೂ ಕ್ರೂರ ಕೃತ್ಯಗಳನ್ನು ಎಸಗಲು ಇಸ್ರೇಲ್‌ಗೆ ಅಮೆರಿಕವು ಕುಮ್ಮಕ್ಕು ನೀಡುತ್ತಿದೆ ಎಂದು ಇರಾನ್‌ನ ಅಧ್ಯಕ್ಷ ಇಬ್ರಾಹೀಂ ರೈಸಿ ಸೋಮವಾರ ಆಪಾದಿಸಿದ್ದಾರೆ.
ಟೆಹರಾನ್‌ಗೆ ಸೋಮವಾರ ಭೇಟಿ ನೀಡಿದ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಗಳು ಸಾಧ್ಯವಾದಷ್ಟು ಬೇಗನೇ ಕೊನೆಗೊಳ್ಳಬೇಕು ಹಾಗೂ ತಕ್ಷಣವೇ ಕದನವಿರಾಮ ಘೋಷಿಸಬೇಕು. ಗಾಝಾದ ದಮನಿತ ಹಾಗೂ ಹೆಮ್ಮೆಯ ಜನತೆಗೆ ನೆರವು ಒದಗಿಸಬೇಕಾಗಿದೆ ಎಂದು ರಯೀಸಿ ಕರೆ ನೀಡಿದರು.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾನವತೆಗೆ ವಿರುದ್ಧವಾದ ಭಯಾನಕ ಅಪರಾಧಗಳನ್ನು ಎಸಗುತ್ತಿದ್ದು, ಜನಾಂಗೀಯ ನರಮೇಧದಲ್ಲಿ ತೊಡಗಿದೆ. ಅಮೆರಿಕ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳ ಬೆಂಬಲದಿಂದಾಗಿ ಮಾತ್ರವೇ ಇಸ್ರೇಲ್‌ನ ಯೆಹೂದ್ಯವಾದಿ ಸರಕಾರವು ಇದನ್ನು ನಡೆಸಲು ಸಾಧ್ಯವೆಂದು ನಾವು ಭಾವಿಸಿರುವುದಾಗಿ ಅವರು ಹೇಳಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್, ಬಾಗ್ದಾದ್‌ಗೆ ಭೇಟಿ ನೀಡಿದ ಮರುದಿನವೇ ಇರಾಕ್ ಪ್ರಧಾನಿ ಅಲ್ ಸುಡಾನಿ ಅವರು ಇರಾನ್‌ಗೆ ಭೇಟಿ ನೀಡಿದ್ದಾರೆ. ಇರಾಕ್ ಹಾಗೂ ಸಿರಿಯದಲ್ಲಿರುವ ಅಮೆರಿಕ ಪಡೆಗಳ ವಿರುದ್ಧ ದಾಳಿ ನಡೆಸುವ ಬೆದರಿಕೆ ಹಾಕುತ್ತಿರುವ ಉಗ್ರಗಾಮಿಗಳಿಗೆ ಇರಾನ್ ಜೊತೆ ನಂಟಿದೆಯೆಂದು ಬ್ಲಿಂಕೆನ್ ಆಪಾದಿಸಿದ್ದರು. ಕಳೆದ ತಿಂಗಳಿನಿಂದ ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷ ಭುಗಿಲೆದ್ದ ಬಳಿಕ ಇರಾಕ್‌ನಲ್ಲಿರುವ ಅಮೆರಿಕ ಪಡೆಗಳು ಸೇನಾ ನೆಲೆಗಳನ್ನು ಗುರಿಯಿರಿಸಿ ದಾಳಿ ನಡೆಸುತ್ತಿವೆ.