“ಫೆಲೆಸ್ತೀನ್ ಸ್ವತಂತ್ರಗೊಳಿಸಿ” ಘೋಷಣೆ ಕೂಗುತ್ತಾ ಆತ್ಮಾಹುತಿ ಯತ್ನ ನಡೆಸಿದ್ದ ಅಮೆರಿಕ ವಾಯುಪಡೆ ಅಧಿಕಾರಿ ಸಾವು
ವಾಷಿಂಗ್ಟನ್: “ಫೆಲೆಸ್ತೀನ್ ಅನ್ನು ಮುಕ್ತಗೊಳಿಸಿ” ಎಂಬ ಘೊಷಣೆ ಕೂಗುತ್ತಾ ವಾಷಿಂಗ್ಟನ್ ಡಿಸಿ ಯಲ್ಲಿರುವ ಇಸ್ರೇಲಿ ದೂತಾವಾಸ ಕಚೇರಿ ಮುಂದೆ ಆತ್ಮಾಹುತಿಗೆ ಯತ್ನಿಸಿದ್ದ ಅಮೆರಿಕಾದ ವಾಯು ಪಡೆ ಅಧಿಕಾರಿ ಆರೋನ್ ಬುಶ್ನೆಲ್ (25) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ರವಿವಾರ ನಡೆದಿತ್ತು ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆರೋನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ರವಿವಾರ ಟ್ವಿಚ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆರಂಭಿಸಿದ್ದ ಆರೋನ್ ಬುಶ್ನೆಲ್ ಮಿಲಿಟರಿ ಸಮವಸ್ತ್ರ ಧರಿಸಿದ್ದು ಕಂಡು ಬಂದಿತ್ತು. ತಾವು ಪ್ರತಿಭಟನೆಯ ವಿಪರೀತ ಕ್ರಮಕ್ಕೆ ಮುಂದಾಗಿರುವುದಾಗಿ ಹಾಗೂ ಇನ್ನು ಗಾಝಾದಲ್ಲಿನ ನರಮೇಧದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದಿದ್ದರು.
ಈ ಘಟನೆಗೂ ಮುನ್ನ ಆರೋನ್ ಹಲವಾರು ವರದಿಗಾರರು ಹಾಗೂ ಎಡಪಂಥೀಯ ವೆಬ್‌ಸೈಟ್‌ಗಳಿಗೆ ಇಮೇಲ್ ಮಾಡಿದ್ದರು.
“ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ತೀವ್ರ ರೂಪದ ಪ್ರತಿಭಟನೆಯನ್ನು ಇಂದು ನಾನು ಕೈಗೊಳ್ಳಲಿದ್ದೇನೆ,” ಎಂದು ಆರೋನ್ ಇಮೇಲ್‌ನಲ್ಲಿ ಹೇಳಿದ್ದರು.