ಅಲ್ಪ ಶ್ರೇಣಿಯ ಸ್ಫೋಟಕದಿಂದ ಇಸ್ಮಾಯೀಲ್ ಹಾನಿಯೆಹ್ ಹತ್ಯೆ | ಸೂಕ್ತ ಸಮಯದಲ್ಲಿ ಪ್ರತೀಕಾರ ಕ್ರಮ: ಇರಾನ್ ಹೇಳಿಕೆ
ಟೆಹ್ರಾನ್ : ಟೆಹ್ರಾನ್‍ನಲ್ಲಿನ ತನ್ನ ನಿವಾಸದಲ್ಲಿದ್ದ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್‍ರನ್ನು ಅವರ ಮನೆಯ ಹೊರಗಿಂದ, 7 ಕಿ.ಗ್ರಾಂ. ಸಿಡಿತಲೆಯನ್ನು ಹೊಂದಿದ್ದ ಅಲ್ಪಶ್ರೇಣಿಯ ಸ್ಫೋಟಕಗಳನ್ನು ಬಳಸಿ ಹತ್ಯೆ ಮಾಡಲಾಗಿದೆ ಎಂದು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ)ಯನ್ನು ಉಲ್ಲೇಖಿಸಿ `ರಾಯ್ಟರ್ಸ್' ಶನಿವಾರ ವರದಿ ಮಾಡಿದೆ.
ಕ್ರಿಮಿನಲ್ ಅಮೆರಿಕ ಸರಕಾರದ ಬೆಂಬಲದಿಂದ ಇಸ್ರೇಲ್ ದಾಳಿ ನಡೆಸಿದೆ ಎಂದು ಐಆರ್‍ಜಿಸಿ ಒತ್ತಿ ಹೇಳಿದೆ.
` ಸುಮಾರು 7 ಕಿ.ಗ್ರಾಂ. ಸಿಡಿತಲೆಯನ್ನು ಹೊಂದಿದ್ದ ಕಡಿಮೆ ದೂರ ಶ್ರೇಣಿಯ ಸ್ಫೋಟಕವನ್ನು ಬಳಸಿ ಈ ಭಯೋತ್ಪಾದಕ ಕಾರ್ಯಾಚರಣೆ ನಡೆಸಲಾಗಿಎದೆ. ಅತಿಥಿಗಳ ನಿವಾಸದ ಹೊರಗಡೆ ಭಾರೀ ಸ್ಫೋಟದೊಂದಿಗೆ ದಾಳಿ ನಡೆದಿರುವುದು ತನಿಖೆ ಮತ್ತು ವಿಶ್ಲೇಷಣೆಯ ಆಧಾರದಲ್ಲಿ ದೃಢಪಟ್ಟಿದೆ ಎಂದು ಹೇಳಿಕೆ ತಿಳಿಸಿದೆ.
ಹಾನಿಯೆಹ್ ಅವರು ತಂಗಿದ್ದ ನಿವಾಸದಲ್ಲಿ ಸ್ಫೋಟಕವನ್ನು ಇರಿಸಿ ದೂರನಿಯಂತ್ರಿತ ಸಾಧನದ ಮೂಲಕ ಸ್ಫೋಟಿಸಿರುವುದಾಗಿ ಈ ಹಿಂದೆ ವರದಿಯಾಗಿತ್ತು. `ಹಾನಿಯೆಹ್ ಹತ್ಯೆಗೆ ಇರಾನ್ ಸೂಕ್ತ ಸಮಯ, ಸ್ಥಳ ಮತ್ತು ವಿಧಾನದ ಮೂಲಕ ತೀವ್ರ ಪ್ರತೀಕಾರ ಕೈಗೊಳ್ಳುವುದಾಗಿ ಐಆರ್‍ಜಿಸಿ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಸಂಘರ್ಷ ವ್ಯಾಪಕಗೊಳ್ಳುವ ಭೀತಿ ಮೂಡಿಸಿದೆ. ` ಇಸ್ಮಾಯೀಲ್ ಹಾನಿಯೆಹ್ ಅವರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಭಯೋತ್ಪಾದಕ ಇಸ್ರೇಲ್ ಆಡಳಿತ ಕಠಿಣ ಶಿಕ್ಷೆಯನ್ನು ಪಡೆಯಲಿದೆ' ಎಂದು ಐಆರ್‍ಜಿಸಿ ಹೇಳಿದೆ.
ಹಮಾಸ್‍ನ ರಾಜಕೀಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಾನಿಯೆಹ್‍ರನ್ನು ಜುಲೈ 31ರಂದು ಬೆಳಿಗ್ಗೆ 2 ಗಂಟೆಗೆ ಇರಾ ರಾಜಧಾನಿ ಟೆಹ್ರಾನ್‍ನಲ್ಲಿನ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಇರಾನ್‍ನ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಈ ದಾಳಿಯನ್ನು ಇಸ್ರೇಲ್ ನಡೆಸಿರುವುದಾಗಿ ಹಮಾಸ್, ಇರಾನ್ ಆರೋಪಿಸಿವೆ. ಆದರೆ ಇಸ್ರೇಲ್ ಇದನ್ನು ನಿರಾಕರಿಸಿಲ್ಲ ಅಥವಾ ಸಮರ್ಥಿಸಿಲ್ಲ. ಈ ಮಧ್ಯೆ, ಈ ವಾರಾಂತ್ಯ ಇರಾನ್ ಮತ್ತದರ ಮಿತ್ರರಿಂದ ಪ್ರತೀಕಾರ ದಾಳಿ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿವೆ ಎಂದು ವರದಿಯಾಗಿದೆ. ಇಸ್ರೇಲ್ ಮೇಲೆ ವ್ಯಾಪಕ ಕ್ಷಿಪಣಿ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದಾಗಿ ಇಸ್ರೇಲ್‍ನ ಉನ್ನತ ಅಧಿಕಾರಿ ಹೇಳಿದ್ದಾರೆ.
ಹೆಚ್ಚುವರಿ ಸಮರನೌಕೆ, ಯುದ್ಧನೌಕೆ ನಿಯೋಜಿಸಿದ ಅಮೆರಿಕ
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹೆಚ್ಚುವರಿ ಸಮರನೌಕೆಗಳು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತುಂಡರಿಸುವ ಸಾಮಥ್ರ್ಯವಿರುವ ಸಮರನೌಕೆಗಳನ್ನೂ ವ್ಯವಸ್ಥೆ ಮಾಡಿರುವುದಾಗಿ ಪೆಂಟಗಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಲೆಬನಾನ್‍ನಿಂದ ತಕ್ಷಣ ಸ್ಥಳಾಂತರಕ್ಕೆ ಅಮೆರಿಕ ಪ್ರಜೆಗಳಿಗೆ ಸೂಚನೆ
ಲಭ್ಯವಿರುವ ಯಾವುದೇ ವಿಮಾನದ ಮೂಲಕ ತಕ್ಷಣ ಲೆಬನಾನ್‍ನಿಂದ ಸ್ಥಳಾಂತರಗೊಳ್ಳುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಶನಿವಾರ ಸೂಚಿಸಿದೆ.
ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆಗೆ ಇರಾನ್ ಹಾಗೂ ಮಧ್ಯಪ್ರಾಚ್ಯ ವಲಯದಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪುಗಳು ಪ್ರತೀಕಾರ ದಾಳಿಯ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ವಲಯದಲ್ಲಿ ಹೆಚ್ಚುವರಿ ಸಮರ ನೌಕೆ, ಯುದ್ಧನೌಕೆ, ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸುವ ಸಾಮಥ್ರ್ಯದ ಸಮರ ನೌಕೆಗಳನ್ನು ನಿಯೋಜಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಘೋಷಿಸಿದ್ದಾರೆ.ಈ ಮಧ್ಯೆ, ಲೆಬನಾನ್‍ನ ಬೈರೂತ್‍ನಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚುವುದಾಗಿ ಸ್ವೀಡನ್ ಘೋಷಿಸಿದ್ದು ಲೆಬನಾನ್‍ನಲ್ಲಿರುವ ತನ್ನ ಪ್ರಜೆಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ.
`ಬೈರೂತ್‍ನಲ್ಲಿರುವ ರಾಯಭಾರಿ ಕಚೇರಿಯ ಸಿಬ್ಬಂದಿಗಳು ತಕ್ಷಣ ಸೈಪ್ರಸ್‍ಗೆ ಸ್ಥಳಾಂತರಗೊಳ್ಳಬೇಕು. ಲೆಬನಾನ್‍ನ ದೂತಾವಾಸವನ್ನು ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲು ವಿದೇಶಾಂಗ ಇಲಾಖೆ ಯೋಜಿಸಿದೆ. ಆಗಸ್ಟ್ ಒಂದು ತಿಂಗಳ ಮಟ್ಟಿಗೆ ದೂತಾವಾಸವನ್ನು ಸ್ಥಳಾಂತರಿಸಲಾಗುವುದು. ಅಗತ್ಯ ಬಿದ್ದರೆ ಈ ಅವಧಿಯನ್ನು ವಿಸ್ತರಿಸಲಾಗುವುದು. ಈ ಬೇಸಿಗೆಯಲ್ಲಿ ಸುಮಾರು 10,000 ಸ್ವೀಡನ್ ಪ್ರಜೆಗಳು ಲೆಬನಾನ್‍ಗೆ ಪ್ರಯಾಣಿಸಿರುವ ನಿರೀಕ್ಷೆಯಿದೆ. ಅವರು ತಕ್ಷಣ ಲೆಬನಾನ್ ತೊರೆಯಬೇಕು' ಎಂದು ಸ್ವೀಡನ್ ವಿದೇಶಾಂಗ ಸಚಿವ ತೊಬಿಯಾಸ್ ಬಿಲ್‍ಸ್ಟ್ರಾಮ್‍ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.