ಬ್ರಿಟನ್‍ನಲ್ಲಿ ಪರಮಾಣು ಶಸ್ತ್ರಾಸ್ತ್ರ ಸ್ಥಾಪನೆಗೆ ಅಮೆರಿಕ ನಿರ್ಧಾರ: ವರದಿ

Update: 2024-01-27 17:17 GMT

Photo: dornsife.usc.edu

ವಾಷಿಂಗ್ಟನ್: ರಶ್ಯದ ಜತೆಗಿನ ಯುದ್ಧದ ಭೀತಿ ಹೆಚ್ಚುತ್ತಿರುವಂತೆಯೇ ಕಳೆದ 15 ವರ್ಷಗಳಲ್ಲೇ ಮೊದಲ ಬಾರಿಗೆ ಬ್ರಿಟನ್‍ನಲ್ಲಿ ತನ್ನ ಪರಮಾಣು ಶಸ್ತ್ರಾಸ್ತ್ರಗಳ ನೆಲೆ ಸ್ಥಾಪನೆಗೆ ಅಮೆರಿಕ ಚಿಂತನೆ ನಡೆಸುತ್ತಿದೆ ಎಂದು ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಸ್ತಾವನೆಯ ಪ್ರಕಾರ, ಪರಮಾಣು ಸಿಡಿತಲೆಗಳನ್ನು ಇಂಗ್ಲೆಂಡಿನ ಪೂರ್ವ ಕರಾವಳಿ ನಗರ ಸಫೋಲ್ಕ್‍ನ ಲೇಕನ್‍ಹೀತ್ ಪ್ರದೇಶದಲ್ಲಿರುವ ವಾಯುಪಡೆ ನೆಲೆಯಲ್ಲಿ ಸ್ಥಾಪಿಸಲಾಗುವುದು. ಈ ಶಸ್ತ್ರಾಸ್ತ್ರಗಳು  1945ರಲ್ಲಿ ಜಪಾನ್‍ನ ಹಿರೊಷಿಮಾ ನಗರದ ಮೇಲೆ ಅಮೆರಿಕ ಹಾಕಿದ್ದ ಬಾಂಬ್‍ಗಿಂತ ಮೂರು ಪಟ್ಟು ಅಧಿಕ ವಿನಾಶಕಾರಿ ಸಾಮರ್ಥ್ಯಗಳನ್ನು ಹೊಂದಿವೆ ಎಂದು `ದಿ ಟೆಲಿಗ್ರಾಫ್' ವರದಿ ಮಾಡಿದೆ.

ರಶ್ಯದಿಂದ ಎದುರಾಗಿದ್ದ ಶೀತಲ ಸಮರ ದೂರವಾಗಿದೆ ಎಂದು ಭಾವಿಸಿದ್ದ ಅಮೆರಿಕ 2008ರಲ್ಲಿ ಬ್ರಿಟನ್‍ನಲ್ಲಿ ಸ್ಥಾಪಿಸಿದ್ದ ತನ್ನ ಪರಮಾಣು ಕ್ಷಿಪಣಿಗಳನ್ನು ತೆರವುಗೊಳಿಸಿತ್ತು. ರಶ್ಯ ಹಾಗೂ ನೇಟೋ ದೇಶಗಳ ನಡುವೆ ಸಂಭಾವ್ಯ ಯುದ್ಧದ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಬಳಿಕ ರಶ್ಯದಿಂದ ಬೆದರಿಕೆ ಹೆಚ್ಚಿರುವುದರಿಂದ ನೇಟೊ ಸದಸ್ಯ ರಾಷ್ಟ್ರಗಳ ಪರಮಾಣು ಸ್ಥಾವರಗಳನ್ನು ಬಲಪಡಿಸುವ ಪ್ರಕ್ರಿಯೆಯ ಅಂಗವಾಗಿ ಅಮೆರಿಕದ ಪರಮಾಣು ಸಿಡಿತಲೆಗಳನ್ನು ಬ್ರಿಟನ್‍ನಲ್ಲಿ ನಿಯೋಜಿಸುವ ಪ್ರಸ್ತಾವನೆ ಮಂಡಿಸಲಾಗಿದೆ ಎಂದು ವರದಿ ಹೇಳಿದೆ.

ಈ ಮಧ್ಯೆ, ಬ್ರಿಟನ್ ಸೇನೆಯ ನಿರ್ಗಮಿತ ಮುಖ್ಯಸ್ಥ ಜನರಲ್ ಪ್ಯಾಟ್ರಿಕ್ ಸ್ಯಾಂಡರ್ಸ್ ಈ ವಾರದ ಆರಂಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ `ರಶ್ಯದ ಜತೆಗಿನ ಸಂಭಾವ್ಯ ಯುದ್ಧಕ್ಕಾಗಿ 45,000 ಮೀಸಲು ಯೋಧರನ್ನು ಸನ್ನದ್ಧಗೊಳಿಸುವ ಯೋಜನೆಯಿದೆ' ಎಂದು ಹೇಳಿರುವುದಾಗಿ `ದಿ ಗಾರ್ಡಿಯನ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News