ಬೈಡನ್ ವಿರುದ್ಧದ ದೋಷಾರೋಪಣೆ ವಿಚಾರಣೆಗೆ ಅಮೆರಿಕ ಸಂಸತ್ ಅನುಮೋದನೆ
ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್ ವಿರುದ್ಧದ ಔಪಚಾರಿಕ ದೋಷಾರೋಪಣೆ ವಿಚಾರಣೆ ಆರಂಭಿಸಲು ಅಮೆರಿಕ ಸಂಸತ್‍ನ ಕೆಳಮನೆ ಹೌಸ್‍ಆಫ್ ರೆಪ್ರಸೆಂಟೇಟಿವ್ಸ್ ಅನುಮೋದನೆ ನೀಡಿದೆ. ಅಧ್ಯಕ್ಷರ ದುರ್ನಡೆಯ ಆರೋಪದ ಬಗ್ಗೆ ಹೆಚ್ಚಿನ ಪುರಾವೆಗಳಿಲ್ಲದಿದ್ದರೂ ರಾಜಕೀಯ ಉದ್ದೇಶದ ಈ ಉಪಕ್ರಮವನ್ನು ರಿಪಬ್ಲಿಕನ್ ಸಂಸದರು ಬೆಂಬಲಿಸಿದ್ದಾರೆ.
ರಿಪಬ್ಲಿಕನ್ನರು ಬಹುಮತ ಹೊಂದಿರುವ ಹೌಸ್ ಆಫ್ ರೆಪ್ರಸೆಂಟೇಟಿವ್ ದೋಷಾರೋಪಣೆ ಪ್ರಕ್ರಿಯೆಯ ನಿರ್ಣಯವನ್ನು 221-212 ಮತಗಳಿಂದ ಅನುಮೋದಿಸಿದೆ. ಗಂಭೀರ ಪ್ರಕರಣವಾದರೆ ಅಧ್ಯಕ್ಷರ ಪದಚ್ಯುತಿಗೂ ಸಂವಿಧಾನ ಅವಕಾಶ ನೀಡಿದೆ. ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ತನ್ನ ಪುತ್ರ ಹಂಟರ್ ಬೈಡನ್ ಮಾಲಕತ್ವದ ಸಂಸ್ಥೆಗಳಿಗೆ ತನ್ನ ಸ್ಥಾನಮಾನದ ಪ್ರಭಾವ ಬಳಸಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವಿಪಕ್ಷಗಳು ಜೋ ಬೈಡನ್ ವಿರುದ್ಧ ಆರೋಪ ಹೊರಿಸಿವೆ.
ಆದರೆ ತನ್ನ ಕುಟುಂಬ ಮತ್ತು ತನ್ನ ವಿರುದ್ಧ ತನಿಖೆ ನಡೆಸುವುದಕ್ಕೆ ರಿಪಬ್ಲಿಕನ್ನರು ಆದ್ಯತೆ ನೀಡಿರುವುದು ಪ್ರಶ್ನಾರ್ಹವಾಗಿದೆ ಎಂದು ಬೈಡನ್ ಪ್ರತಿಕ್ರಿಯಿಸಿದ್ದಾರೆ. ` ಅಮೆರಿಕನ್ನರ ಬದುಕನ್ನು ಉತ್ತಮಗೊಳಿಸಲು ನೆರವಾಗುವ ಕ್ರಮಗಳನ್ನು ಕೈಗೊಳ್ಳುವ ಬದಲು ಅವರು ಸುಳ್ಳಿನ ಸರಮಾಲೆಯೊಂದಿಗೆ ನನ್ನ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಆಧಾರರಹಿತ ರಾಜಕೀಯ ಸ್ಟಂಟ್‍ನಲ್ಲಿ ಸಮಯ ವ್ಯರ್ಥಗೊಳಿಸುತ್ತಿದ್ದಾರೆ' ಎಂದು ಬೈಡನ್ ಟೀಕಿಸಿದ್ದಾರೆ.
ಬೈಡನ್ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆ 2024ರ ಅಧ್ಯಕ್ಷೀಯ ಚುನಾವಣೆಯವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಈ ಮೂಲಕ ರಾಜಕೀಯ ಲಾಭ ಪಡೆಯುವುದು ರಿಪಬ್ಲಿಕನ್ನರ ಉದ್ದೇಶವಾಗಿದೆ. ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್(ರಿಪಬ್ಲಿಕನ್ ಮುಖಂಡ) ಎರಡು ಬಾರಿ ದೋಷಾರೋಪಣೆಗೆ ಒಳಗಾಗಿದ್ದರು. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಮತ್ತು ಬೈಡನ್ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.