ಕ್ಯೂಬಾದ ನೌಕಾನೆಲೆಗೆ ಅಮೆರಿಕದ ಸಬ್‍ಮೆರಿನ್, ಕೆನಡಾ ಯುದ್ಧನೌಕೆ
ಹವಾನಾ : ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಅಮೆರಿಕದ ನೌಕಾನೆಲೆಯಲ್ಲಿ ಕ್ಷಿಪ್ರದಾಳಿ ಸಾಮರ್ಥ್ಯದ ಸಬ್‍ಮೆರಿನ್ ಅನ್ನು ನಿಯೋಜಿಸಿರುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಕೆನಡಾವು ತನ್ನ ಗಸ್ತು ಸಮರನೌಕೆಯನ್ನು ಗ್ವಾಂಟನಾಮೊಗೆ ರವಾನಿಸಿರುವುದಾಗಿ ವರದಿಯಾಗಿದೆ.
ಈ ವಾರದ ಆರಂಭದಲ್ಲಿ ರಶ್ಯದ ಪರಮಾಣು ಶಕ್ತ ಸಬ್‍ಮೆರಿನ್ ಕ್ಯೂಬಾ ಬಂದರಿಗೆ ಆಗಮಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಸೋವಿಯತ್ ಒಕ್ಕೂಟದ ಅವಧಿಯಲ್ಲಿ ಕಮ್ಯುನಿಸ್ಟ್ ದೇಶ ಕ್ಯೂಬಾ ಸೋವಿಯತ್‍ನ ಮಿತ್ರ ದೇಶವಾಗಿ ಗುರುತಿಸಿಕೊಂಡಿತ್ತು.
ಈ ಮಧ್ಯೆ, ತನ್ನ ಕ್ಷಿಪ್ರದಾಳಿ ಸಾಮರ್ಥ್ಯದ ಹೆಲೆನಾ ಸಬ್‍ಮೆರಿನ್ ವಾಡಿಕೆಯ ಭೇಟಿಗಾಗಿ ಗ್ವಾಂಟನಾಮೊ ಕೊಲ್ಲಿಯಲ್ಲಿನ ನೌಕಾನೆಲೆಗೆ ಆಗಮಿಸಿದೆ ಎಂದು ಅಮೆರಿಕದ ದಕ್ಷಿಣ ಕಮಾಂಡ್ ಶುಕ್ರವಾರ ಹೇಳಿಕೆ ನೀಡಿದೆ. ಇದರ ಬೆನ್ನಲ್ಲೇ ಕೆನಡಾವು ತನ್ನ ಗಸ್ತು ಸಮರನೌಕೆ ಮಾರ್ಗರೆಟ್ ಬ್ರೂಕ್ ಅನ್ನು ಹವಾನಾ ಬಂದರಿನತ್ತ ರವಾನಿಸಿದೆ ಎಂದು ವರದಿಯಾಗಿದೆ. ಗ್ವಾಂಟನಾಮೊ ಕೊಲ್ಲಿ ಕ್ಯೂಬಾದ ಹವಾನಾ ದ್ವೀಪದ 850 ಕಿ.ಮೀ ದೂರದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯೂಬಾ `ಅಮೆರಿಕದ ಸಬ್‍ಮೆರಿನ್ ಆಗಮಿಸುವ ಬಗ್ಗೆ ತನಗೆ ಮಾಹಿತಿ ನೀಡಲಾಗಿದ್ದರೂ ಇದರಿಂದ ತನಗೆ ಸಂತೋಷವಾಗಿಲ್ಲ. ಯಾಕೆಂದರೆ ಆಹ್ವಾನವಿದ್ದರೆ ಮಾತ್ರ ದೇಶವೊಂದರ ಸಮರನೌಕೆಗಳು ಭೇಟಿ ನೀಡುತ್ತವೆ. ಆದರೆ ಇಲ್ಲಿ ನಾವು ಆಹ್ವಾನ ನೀಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ. `ಕ್ಯೂಬಾ ವಿರುದ್ಧ ಪ್ರತಿಕೂಲವಾದ ನೀತಿಯನ್ನು ಅಧಿಕೃತವಾಗಿ ನಿರ್ವಹಿಸುವ ಶಕ್ತರಾಷ್ಟ್ರಕ್ಕೆ ಸೇರಿದ ಸಬ್‍ಮೆರಿನ್ ನಮ್ಮ ಭೂಪ್ರದೇಶದಲ್ಲಿ ಇರುವುದನ್ನು ನಾವು ಇಷ್ಟಪಡುವುದಿಲ್ಲ' ಎಂದು ಕ್ಯೂಬಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.