ಅಮೇರಿಕಾ: ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ ಗೌರವ ಪುರಸ್ಕಾರ

Update: 2024-09-04 09:01 GMT

ವರ್ಜೀನಿಯಾ: ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ ಪ್ರತಿಷ್ಠಿತ 12ನೇ ವಿಶ್ವ ಕನ್ನಡ ಸಮೇಳನದಲ್ಲಿ ಅಕ್ಕ ಸಮ್ಮೇಳನ ಸಮಿತಿ ಮತ್ತು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಜಂಟಿಯಾಗಿ ಕರ್ನಾಟಕದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ವಿಜೇತ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ 'ವಿಶ್ವ ಮಾನ್ಯ ಕನ್ನಡಿಗ-2024' ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದೆ.

ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ಮೂವತ್ತಾರು ವರ್ಷಗಳ ಸುದೀರ್ಘ ಪಯಣದಲ್ಲಿ ಅಪ್ರತಿಮ ಎದೆಗಾರಿಕೆ ತೋರಿದ ಅಧಿಕಾರಿಯೆಂಬ ಹಿರಿಮೆ ಗಿಟ್ಟಿಸಿಕೊಂಡಿದ್ದ ಬಾವಾ ಅವರು ಅತ್ಯಂತ ಕಠಿಣ ಪರಿಶ್ರಮದಿಂದ ಪದವಿ ಪೂರೈಸಿದರು. 1971 ರಲ್ಲಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ ನಂತರದ ದಿನಗಳಲ್ಲಿ ಕರ್ನಾಟಕದಾದ್ಯಂತ ಪಿಎಸ್ಐ, ಸರ್ಕಲ್ ಇನ್ಸ್ ಪೆಕ್ಟರ್, ಎಸ್ಪಿ,ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮೊದಲಾದ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ತತ್ವನಿಷ್ಠ-ಕರ್ತವ್ಯ ಪ್ರಜ್ಞೆಯ, ಅದ್ವಿತೀಯ ಕ್ರಿಯಾಶೀಲ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.‌ ಇದೀಗ ಇಲಾಖೆಯ ನಿವೃತ್ತಿಯ ನಂತರವೂ ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್.ಎಲ್.ಬಿ ಸ್ನಾತಕೋತ್ತರ ಪದವಿಯನ್ನು ಪೂರೈಸಿರುವ ಅವರು ಅಂದಿನ ಕಾಲಘಟ್ಟದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಗೂಢಚರ್ಯ ವಿಭಾಗದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ವೀರಪ್ಪನ್ ಸಹಚರರನ್ನು ಹಿಡಿಯುವಲ್ಲಿ ಮಹತ್ವದ ಪಾತ್ರ ಪಾತ್ರ ವಹಿಸಿದ್ದು ಪೋಲೀಸ್ ಕರ್ತವ್ಯದ ಅವರ ಸೇವೆಗೆ ರಾಷ್ಟ್ರಪತಿಗಳ ಚಿನ್ನದ ಪದಕ, ಮೂರು ಬಾರಿ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಬಾವಾ ಅವರನ್ನು ಗೌರವಿಸಿ ಸನ್ಮಾನಿಸಿವೆ.‌

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿ  ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಎಚ್.ಆಂಜನೇಯ , ರಾಣಿ ಸತೀಶ್, ಅಕ್ಕ ಸಮ್ಮೇಳನ ಸಮಿತಿಯ ಮುಖಂಡರಾದ ಡಾ. ಅಮರನಾಥ ಗೌಡ, ಡಾ. ವಿಶ್ವಾಮಿತ್ರ ಹಳೆಕೋಟೆ, ಅಕ್ಕ ಸಮಿತಿಯ ಅಧ್ಯಕ್ಷ  ರವಿ ಬೋರೇಗೌಡ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಡಬ್ಲ್ಯೂ. ಕೆ.ಸಿ.ಸಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್, ಸರ್ಕಾರದ ಜಂಟಿ ಆಯುಕ್ತರಾದ ಡಾ.ರಾಮಾನುಜ, ಮುಹಮ್ಮದ್ ರಫಿ ಪಾಷಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News