ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯ ಹಿಂಸಾಚಾರ ನಿಯಂತ್ರಣ ತಪ್ಪಬಹುದು: ವಿಶ್ವಸಂಸ್ಥೆ ಎಚ್ಚರಿಕೆ

Update: 2023-06-23 16:26 GMT

ಜಿನೆವಾ: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಹೊಸದಾಗಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಣ ಮೀರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ವೋಕರ್ ಟರ್ಕ್ ಶುಕ್ರವಾರ ಎಚ್ಚರಿಸಿದ್ದಾರೆ.

‘ಇಸ್ರೇಲಿ ಮಿಲಿಟರಿಯ ಆಕ್ರಮಣ ಅಥವಾ ಫೆಲೆಸ್ತೀನೀಯರ ದಾಳಿಯಲ್ಲಿ ಈ ವಾರ ಕನಿಷ್ಟ 18 ಜನರು ಪಶ್ಚಿಮದಂಡೆಯಲ್ಲಿ ಹತರಾಗಿದ್ದಾರೆ. ಈ ಇತ್ತೀಚಿನ ಹತ್ಯೆಗಳು ಮತ್ತು ಹಿಂಸಾಚಾರ, ಪ್ರಚೋದಕ ಹೇಳಿಕೆಗಳು ಇಸ್ರೇಲಿಯನ್ನರು ಹಾಗೂ ಫೆಲೆಸ್ತೀನೀಯರು ಇಬ್ಬರನ್ನೂ ಪ್ರಪಾತದೆಡೆಗೆ ತಳ್ಳಲಿದೆ’ ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನ್(ಯುಎಚ್ಸಿಎಚ್ಆರ್)ನ ಮುಖ್ಯಸ್ಥ ಟರ್ಕ್ ಹೇಳಿದ್ದಾರೆ.

ಪಶ್ಚಿಮದಂಡೆಯಲ್ಲಿನ ಸಂಘರ್ಷ, ಹಿಂಸಾಚಾರಕ್ಕೆ ಈ ವರ್ಷ ಇದುವರೆಗೆ 200ಕ್ಕೂ ಅಧಿಕ ಮಂದಿ ಬಲಿಯಾಗಿದ್ದು ಮೃತರಲ್ಲಿ ಹೆಚ್ಚಿನವರು ಫೆಲೆಸ್ತೀನೀಯರು. ಫೆಲೆಸ್ತೀನೀಯರ ಸಶಸ್ತ್ರ ಹೋರಾಟಗಾರರ ಪಡೆಯ ಭದ್ರಕೋಟೆ ಎನಿಸಿರುವ ಉತ್ತರ ವೆಸ್ಟ್ಬ್ಯಾಂಕ್ ಪ್ರದೇಶದಲ್ಲಿ ಇತ್ತೀಚೆಗೆ ಇಸ್ರೇಲ್ ಸೇನೆ ತನ್ನ ಕಾರ್ಯಾಚರಣೆ ಹೆಚ್ಚಿಸಿದ ಬಳಿಕ ಅಲ್ಲಿ ಮಾರಣಾಂತಿಕ ಹಿಂಸಾಚಾರ ಭುಗಿಲೆದ್ದಿದೆ.

ಈ ಹಿಂಸಾಚಾರದ ದಳ್ಳುರಿಗೆ ರಾಜಕೀಯ ಹೇಳಿಕೆಗಳು ಮತ್ತು ಇಸ್ರೇಲ್ ಸೇನೆಯಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯು ತುಪ್ಪ ಸುರಿಯುತ್ತಿವೆ. ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯ ತೀವ್ರ ಕುಸಿತವು ಫೆಲೆಸ್ತೀನೀಯರ ಮೇಲಷ್ಟೇ ಅಲ್ಲ ಇಸ್ರೇಲ್ ಮೇಲೆಯೂ ತೀವ್ರ ಪರಿಣಾಮಕ್ಕೆ ಕಾರಣವಾಗಲಿದೆ. ಆದ್ದರಿಂದ ಹಿಂಸಾಚಾರ ಅಂತ್ಯಕ್ಕೆ ತುರ್ತು ಕ್ರಮದ ಅಗತ್ಯವಿದೆ. ಎಲ್ಲಾ ಸಾವಿನ ಬಗ್ಗೆಯೂ ಪರಿಣಾಮಕಾರಿ ತನಿಖೆಯ ಅಗತ್ಯವಿದೆ. ಬದುಕುವ ಹಕ್ಕನ್ನು ಗೌರವಿಸುವುದು ಮತ್ತು ರಕ್ಷಿಸುವುದು ಸೇರಿದಂತೆ, ಆಕ್ರಮಿತ ಪಶ್ಚಿಮದಂಡೆಗೆ ಸಂಬಂಧಿಸಿದ ತನ್ನ ನೀತಿ ಹಾಗೂ ಕೃತ್ಯಗಳನ್ನು ಇಸ್ರೇಲ್ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಕ್ಕೆ ಅನುಗುಣವಾಗಿ ಮರುಹೊಂದಿಸಬೇಕಾಗಿದೆ. ಆಕ್ರಮಿತ ಶಕ್ತಿಯಾಗಿ, ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುವ ಅಂತರಾಷ್ಟ್ರೀಯ ಭಾದ್ಯತೆಯನ್ನು ಇಸ್ರೇಲ್ ಹೊಂದಿದೆ ಎಂದು ಟರ್ಕ್ ಹೇಳಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾಗುವ ಕ್ರಿಯೆಗಳು ಮತ್ತು ಅನಿಯಂತ್ರಿತ ಜೀವಹಾನಿಯನ್ನು ತುರ್ತಾಗಿ ಪರಿಹರಿಸಬೇಕಿದೆ. ಇದಕ್ಕೆ ಇಸ್ರೇಲಿಯನ್ನರು, ಫೆಲೆಸ್ತೀನೀಯರು ಹಾಗೂ ಅಂತರಾಷ್ಟ್ರೀಯ ಸಮುದಾಯದ ಇಚ್ಛಾಶಕ್ತಿಯ ಅಗತ್ಯವಿದೆ. ಹಿಂಸಾಚಾರ ನಿಲ್ಲಬೇಕಿದ್ದರೆ ಆಕ್ರಮಣ ಕೊನೆಗೊಳ್ಳಬೇಕು. ಎಲ್ಲಾ ರಾಜಕೀಯ ಮುಖಂಡರಿಗೂ ಇದರ ಅರಿವು ಇದೆ. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸುವಲ್ಲಿ ಅವರು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ವೋಕರ್ ಟರ್ಕ್ ಆಗ್ರಹಿಸಿದ್ದಾರೆ.

ಪಶ್ಚಿಮದಂಡೆ: ಸಾರ್ವತ್ರಿಕ ಪ್ರತಿಭಟನೆ ಘೋಷಣೆ

ಇಸ್ರೇಲ್ ಪಡೆ ಆಕ್ರಮಿತ ಪಶ್ಚಿಮದಂಡೆಯಲ್ಲಿ ಡ್ರೋನ್ ಬಳಸಿ ಮೂವರು ಫೆಲೆಸ್ತೀನೀಯರನ್ನು ಹತ್ಯೆಮಾಡಿರುವುದನ್ನು ವಿರೋಧಿಸಿ ಜೆನಿನ್ ನಗರದಲ್ಲಿ ಗುರುವಾರ ಸಾರ್ವತ್ರಿಕ ಪ್ರತಿಭಟನೆಗೆ ಕರೆನೀಡಲಾಗಿತ್ತು ಎಂದು ವರದಿಯಾಗಿದೆ.

ಜಲಾಮಾ ನಗರದ ಬಳಿ ಇಸ್ರೇಲಿಯನ್ನರತ್ತ ಗುಂಡಿನ ದಾಳಿ ನಡೆಸಿದ ಉಗ್ರರ ಗುಂಪೊಂದು ಕಾರಿನಲ್ಲಿ ಪರಾರಿಯಾಗುತ್ತಿತ್ತು. ಬಂದೂಕುಧಾರಿಗಳ ತಂಡ ಇಸ್ರೇಲಿ ಸೇನೆ ಹಾಗೂ ಪಶ್ಚಿಮದಂಡೆಯ ವಸಾಹತುಗಾರರಿಗೆ ಬೆದರಿಕೆಯಾಗಿತ್ತು. ಆದ್ದರಿಂದ ಡ್ರೋನ್ ಬಳಸಿ ಕಾರಿನಲ್ಲಿದ್ದವರನ್ನು ಹತ್ಯೆಗೈಯಲಾಗಿದೆ. ಈ ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್ನ ಬೆಂಬಲ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಕಾರ್ಯಾಚರಣೆಯನ್ನು ವಿರೋಧಿಸಿ ಗುರುವಾರ ಜೆನಿನ್ ನಗರದಲ್ಲಿ ಸಾರ್ವತ್ರಿಕ ಪ್ರತಿಭಟನೆ ನಡೆದಿದೆ. ಉತ್ತರ ವೆಸ್ಟ್ಬ್ಯಾಂಕ್ ನಲ್ಲಿ ಸೇನಾ ಕಾರ್ಯಾಚರಣೆ ನಡೆಸದಂತೆ ಅಮೆರಿಕ ತಡೆಯುತ್ತಿರುವುದರಿಂದ ಇಸ್ರೇಲ್ ಹತ್ಯೆಯ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.

ಈ ಮಧ್ಯೆ, ಬುಧವಾರ ಇಸ್ರೇಲ್ ವಸಾಹತುಗಾರರು ಪಶ್ಚಿಮದಂಡೆಯಲ್ಲಿನ ಫೆಲೆಸ್ತೀನಿಯನ್ ಗ್ರಾಮಕ್ಕೆ ನುಗ್ಗಿ, ಹಲವು ಮನೆ, ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿರುವುದನ್ನು ಸೌದಿ ಅರೆಬಿಯಾ ತೀವ್ರವಾಗಿ ಖಂಡಿಸಿದೆ. ಅಂತರಾಷ್ಟ್ರೀಯ ನಿರ್ಣಯಗಳು ಮತ್ತು ಅರಬ್ ಶಾಂತಿ ಉಪಕ್ರಮದ ಆಧಾರದ ಮೇಲೆ ಫೆಲೆಸ್ತೀನಿಯನ್ ಸಮಸ್ಯೆಗೆ ನ್ಯಾಯಯುತ ಮತ್ತು ಸಮಗ್ರ ಪರಿಹಾರ ರೂಪಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯತ್ನಗಳಿಗೆ ತನ್ನ ಅಚಲ ಬೆಂಬಲವಿದೆ ಎಂದು ಸೌದಿ ಅರೆಬಿಯಾ ಪುನರುಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News