ರಶ್ಯದಲ್ಲಿ ಅಧ್ಯಕ್ಷೀಯ ಚುನಾವಣೆ: ಕೇರಳದಲ್ಲೂ ಮತದಾನ

Update: 2024-03-15 17:22 GMT

Photo : ANI

ಮಾಸ್ಕೋ: ರಶ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಮಾರ್ಚ್ 15ರಂದು ಆರಂಭಗೊಂಡಿದ್ದು ಮಾರ್ಚ್ 17ರವರೆಗೆ ನಡೆಯಲಿದ್ದು ದೇಶದಾದ್ಯಂತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಭಾರತದ ಕೇರಳದಲ್ಲಿ ನೆಲೆಸಿರುವ ರಶ್ಯನ್ ಪ್ರಜೆಗಳಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ತಿರುವನಂತಪುರದ `ರಶ್ಯನ್ ಹೌಸ್'ನಲ್ಲಿರುವ ರಶ್ಯದ ಗೌರವ ಕಾನ್ಸುಲೇಟ್ ಕಚೇರಿಯಲ್ಲಿ ವಿಶೇಷವಾಗಿ ಸಿದ್ಧಪಡಿಸಿರುವ ಮತದಾನ ಕೇಂದ್ರದಲ್ಲಿ ರಶ್ಯನ್ ಪ್ರಜೆಗಳಿಗೆ ಮತದಾನಕ್ಕೆ ಅವಕಾಶ ಮಾಡಲಾಗಿದೆ ಎಂದು ರಶ್ಯನ್ ಹೌಸ್‍ನ ನಿರ್ದೇಶಕ ರತೀಶ್ ನಾಯರ್ ಹೇಳಿದ್ದಾರೆ.

ರಶ್ಯದ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಸಲು ತಿರುವನಂತಪುರದಲ್ಲಿ ಮೂರನೇ ಬಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೇರಳದಲ್ಲಿ ನೆಲೆಸಿರುವ ರಶ್ಯನ್ ಪ್ರಜೆಗಳು ಹಾಗೂ ಇಲ್ಲಿಗೆ ಆಗಮಿಸಿರುವ ರಶ್ಯನ್ ಪ್ರವಾಸಿಗಳು ಈ ಸೌಲಭ್ಯವನ್ನು ಪಡೆಯಬಹುದು. ರಶ್ಯದ ಕೇಂದ್ರೀಯ ಚುನಾವಣಾ ಆಯೋಗದ ನೆರವಿನಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದ್ದಾರೆ.

ಭಾರತದಲ್ಲಿ ನೆಲೆಸಿರುವ ರಶ್ಯನ್ ಪ್ರಜೆಗಳಿಗೆ ಹಾಗೂ ಭಾರತಕ್ಕೆ ಭೇಟಿ ನೀಡಿರುವ ರಶ್ಯನ್ ಪ್ರವಾಸಿಗಳು ಈ ಸೌಲಭ್ಯವನ್ನು ಪಡೆಯಬಹುದು ಎಂದು ಚೆನ್ನೈಯಲ್ಲಿ ರಶ್ಯದ ಹಿರಿಯ ಕಾನ್ಸುಲ್ ಜನರಲ್ ಸೆರ್ಗೆಯ್ ಅಝುರೋವ್‍ರನ್ನು ಉಲ್ಲೇಖಿಸಿ ಎಎನ್‍ಐ ವರದಿ ಮಾಡಿದೆ.

ರಶ್ಯದ 11 ವಲಯಗಳಾದ್ಯಂತ ಮಾರ್ಚ್ 15ರಿಂದ 17ರವರೆಗೆ ಚುನಾವಣೆ ನಡೆಯಲಿದ್ದು ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಸ್ಪರ್ಧಿಸಲು ಮೂವರು ಅಭ್ಯರ್ಥಿಗಳಿಗೆ ಮಾತ್ರ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಲಿಬರಲ್ ಡೆಮಕ್ರಟಿಕ್ ಪಕ್ಷದ ಲಿಯೊನಿಡ್ ಸ್ಲಟ್ಸ್ಕಿ, ನ್ಯೂ ಪೀಪಲ್ಸ್ ಪಾರ್ಟಿಯ ವ್ಲಾದಿಸ್ಲಾವ್ ಡವನ್ಕೋವ್ ಮತ್ತು ಕಮ್ಯುನಿಸ್ಟ್ ಪಕ್ಷದ ನಿಕೊಲಾಯ್ ಖರಿಟೊನೊವ್ ಈ ಅಭ್ಯರ್ಥಿಗಳಾಗಿದ್ದಾರೆ. ಆದರೆ ಈ ಮೂರೂ ಅಭ್ಯರ್ಥಿಗಳು ಉಕ್ರೇನ್ ಯುದ್ಧವನ್ನು ಸಮರ್ಥಿಸುವವರು. ಬಹುತೇಕ ವಿರೋಧ ಪಕ್ಷದ ಮುಖಂಡರು ಸಾವನ್ನಪ್ಪಿರುವುದರಿಂದ ಅಥವಾ ಜೈಲು ಪಾಲಾಗಿರುವುದರಿಂದ, ಅಥವಾ ದೇಶಭ್ರಷ್ಟ ಜೀವನವನ್ನು ನಡೆಸುತ್ತಿರುವುದರಿಂದ ಅಧ್ಯಕ್ಷ ಪುಟಿನ್ ಗೆಲುವು ಬಹುತೇಕ ನಿಶ್ಚಿತ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News