ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಹೋರಾಟದ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ನಾಯಕ ನಹೀದ್ ಇಸ್ಲಾಂ ಯಾರು?
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಲು ಕಾರಣವಾದ ಮೀಸಲಾತಿ ವಿರೋಧಿ ಹೋರಾಟ ಹಾಗೂ ಸರ್ಕಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿ ನಾಯಕ ನಹೀದ್ ಇಸ್ಲಾಂ ಅವರು ಯಾರೆಂಬ ಕುತೂಹಲ ಎಲ್ಲೆಡೆ ಇದೆ.
ನಹೀದ್ ಇಸ್ಲಾಂ ಅವರು ಢಾಕಾ ವಿವಿಯ ಸೋಶಿಯಾಲಜಿ ವಿಭಾಗದ ವಿದ್ಯಾರ್ಥಿಯಾಗಿದ್ದು ಮಾನವ ಹಕ್ಕು ಹೋರಾಟಗಾರರಾಗಿಯೂ ಹೆಸರು ಪಡೆದಿದ್ದಾರೆ.
ದೇಶದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿಯಲ್ಲಿ ಸುಧಾರಣೆಗಳನ್ನು ಆಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟದ ಮುಂಚೂಣಿಯಲ್ಲಿರುವ ಸ್ಟೂಡೆಂಟ್ಸ್ ಅಗೈನ್ಸ್ಟ್ ಡಿಸ್ಕ್ರಿಮಿನೇಶನ್ ಮೋವ್‌ಮೆಂಟ್‌ನ ರಾಷ್ಟ್ರೀಯ ಸಮನ್ವಯಕಾರರಲ್ಲಿ ನಹೀದ್ ಒಬ್ಬರಾಗಿದ್ದಾರೆ.
ಜೂನ್ 2024ರಲ್ಲಿ ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಸರ್ಕಾರಿ ಹುದ್ದೆಗಳಲ್ಲಿ ನಿವೃತ್ತ ಮಿಲಿಟರಿ ಸಿಬ್ಬಂದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಶೇ.30 ಮೀಸಲಾತಿ ಪುನಃಸ್ಥಾಪಿಸಿದ ನಂತರ ಈ ಹೋರಾಟ ಆರಂಭಗೊಂಡಿತ್ತು.
ನಹೀದ್ ಅವರು ಇದೀಗ ಪದಚ್ಯುತ ಪ್ರಧಾನಿಯಾಗಿರುವ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಕಟು ಟೀಕಾಕಾರರಾಗಿದ್ದರು. ಅವಾಮಿ ಪಕ್ಷವು ವಿದ್ಯಾರ್ಥಿ ಹೋರಾಟಗಾರರನ್ನು ರಸ್ತೆಯಲ್ಲಿ ನಿಯೋಜಿಸಲಾಗಿರುವ ಉಗ್ರವಾದಿಗಳೆಂದು ಬಣ್ಣಿಸಿತ್ತು.
ಈ ಹಿಂದೆ ಶಾಹಭಾಗ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ನಹೀನ್ “ಇಂದು ಬೆತ್ತಗಳನ್ನು ಕೈಗೆತ್ತಿಕೊಂಡಿರುವ ವಿದ್ಯಾರ್ಥಿಗಳು ಅದು ಕೆಲಸ ಮಾಡದಿದ್ದರೆ ಮುಂದೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದಾರೆ,” ಎಂದು ಹೇಳಿದ್ದರು.
ಜುಲೈ 19, 2024ರಂದು ನಹೀದ್ ಅವರನ್ನು ಸಬುಜ್‌ಭಾಗ್ ಪ್ರದೇಶದ ಮನೆಯಿಂದ ನಾಗರಿಕ ಉಡುಪಿನಲ್ಲಿದ್ದ ಕನಿಷ್ಠ 25 ಜನರ ಗುಂಪು ಅಪಹರಿಸಿತ್ತು. ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಕೈಗಳಿಗೆ ಕೋಳ ತೊಡಿಸಿ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತಲ್ಲದೆ ಪ್ರತಿಭಟನೆಗಳಲ್ಲಿ ಅವರ ಶಾಮೀಲಾತಿ ಕುರಿತು ಅವರನ್ನು ಸತತವಾಗಿ ಪ್ರಶ್ನಿಸಲಾಗಿತ್ತು. ಎರಡು ದಿನಗಳ ನಂತರ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪೂರ್ಬಾಚಲ್‌ನ ಸೇತುವೆಯಡಿ ಪತ್ತೆಯಾಗಿದ್ದರು.
ಅವರನ್ನು ಎರಡನೇ ಬಾರಿ ಜುಲೈ 26 ರಂದು ಧನ್ಮೊಂಡಿಯ ಗೊನೊಶಾಸ್ತಾಯ ನಗರ ಆಸ್ಪತ್ರೆಯಿಂದ ಅಪಹರಿಸಲಾಗಿತ್ತು. ತಾವು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಗುಪ್ತಚರ ವಿಭಾಗದವರೆಂದು ಹೇಳಿಕೊಂಡು ಬಂದವರು ಅವರನ್ನು ಕರೆದುಕೊಂಡು ಹೋಗಿದ್ದರು. ಆದರೆ ಈ ಘಟನೆಯಲ್ಲಿ ತಮ್ಮ ಶಾಮೀಲಾತಿಯಿಲ್ಲ ಎಂದು ಪೊಲೀಸರು ನಂತರ ಹೇಳಿದ್ದರು.