ಟೆಂಡರ್ ಕೊಡಿಸುವುದಾಗಿ ಶಾಸಕರಿಂದ 20% ಕಮಿಷನ್: ಜಗನ್ನಾಥ್ ಶೇಗಜಿ ಆರೋಪ
ಕಲಬುರಗಿ: ಕಾಂಗ್ರೆಸ್ ಸರ್ಕಾರದಲ್ಲೂ ಟೆಂಡರ್ ಕಾಮಗಾರಿಗಳಿಗೆ ಎಲ್ಲ ಪಕ್ಷದ ಶಾಸಕರು 10ರಿಂದ 20 ಪರ್ಸೆಂಟ್ ವರೆಗೆ ಕಮಿಷನ್ ಕೇಳುತ್ತಿದ್ದಾರೆಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೇಗಜಿ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರೆಲ್ಲರೂ ಒಂದಾಗಿದ್ದಾರೆ, ಗುತ್ತಿಗೆದಾರರು ಶಾಸಕರ ಬಳಿ ಹೋದರೆ ಎಷ್ಟು ಪರ್ಸೆಂಟೆಜ್ ಕೊಡ್ತೀರಾ? ಅಂತ ಓಪನ್ ಆಗಿ ಕೇಳ್ತಾರೆ, ಯಾರು ಹೆಚ್ಚಿನ ಪರ್ಸೆಂಟೇಜ್ ಕೊಡಲು ಸಿದ್ಧರಿದ್ದಾರೋ ಅವರಿಗೆ ಟೆಂಡರ್ ಗಳನ್ನು ನೀಡುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಸಚಿವರ ಕೈವಾಡವಿಲ್ಲ ಎಂದು ಹೇಳಿದ್ದಾರೆ.
ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಕೊಡಲು ಆಯಾ ಇಲಾಖೆಗಳ ಬಳಿ ಹಣವಿಲ್ಲ, ಆದರೆ ಶಾಸಕರುಗಳ ಪರ್ಸೆಂಟೇಜ್ ದಂಧೆ ಹೆಚ್ಚಾಗಿದೆ, ಈಗಿನ 70 ಪ್ರತಿಶತ ಶಾಸಕರು ಕಮಿಷನ್ ಕೇಳುತ್ತಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ 7 ಮಂದಿ ಸಚಿವರಿಗೆ ಪತ್ರ ಸಹ ಬರೆದಿದ್ದೇವೆ. 10 ದಿನಗಳಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು, ಒಂದು ವೇಳೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲು ರೂಪರೇಷೆ ಹಾಕೈಕೊಂಡಿದ್ದೇವೆ ಎಂದರು.
ಈ ಹಿಂದೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರಕಾರವಿದ್ದಾಗ ಕಮೀಶನ್ ದಂಧೆ 40%ಗೆ ಏರಿತು. ಹಾಗಾಗಿ ಬೊಮ್ಮಾಯಿ ಅವರಿಗೆ ದಾಖಲೆ ಸಮೇತ ಸಾಕ್ಷಿ ನೀಡಿದ್ದೆವು, ಅವರು ಯಾವುದೇ ಕ್ರಮ ಕೈಗೊಳ್ಳದೇ ಇರೋದ್ರಿಂದ ನಾವು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು. ಅವರೂ ಸಹ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟಿಸಿದ್ದೆವು ಎಂದರು.
40 % ಮುಂದಿಟ್ಟುಕೊಂಡು ನಾವು ಪ್ರತಿಭಟಿಸಿ ಗಮನ ಸೆಳೆದರೆ, ಕಾಂಗ್ರೆಸ್ ನವರು ಅದನ್ನೇ ಲಾಭವಾಗಿಸಿ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದ್ದಾರೆ. ಇದೀಗ ಇವರ ಸರಕಾರದಲ್ಲೂ ಸುಲಿಗೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.