ಕಲಬುರಗಿ | ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ ಪಾಂಡಿಚೇರಿ ನೋಂದಣಿಯ 11 ವಾಹನಗಳ ವಶ

ಕಲಬುರಗಿ : ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿಯಾಗಿ ಕರ್ನಾಟಕ ತೆರಿಗೆ ಕಟ್ಟದೇ ನಗರದಲ್ಲಿ ಸಂಚರಿಸುತ್ತಿರುವ 11 ವಾಹನಗಳನ್ನು ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ವಶಪಡಿಸಿಕೊಂಡು ಆರ್‍ಟಿಓ ಡ್ರೈವಿಂಗ್ ಟ್ರ್ಯಾಕ್‍ನಲ್ಲಿ ನಿಲ್ಲಿಸಿದ್ದು, ಆದ್ದರಿಂದ ಸಂಬಂಧಪಟ್ಟ ವಾಹನಗಳ ಮಾಲಕರು ಕರ್ನಾಟಕ ರಾಜ್ಯದ ತೆರಿಗೆ ಭರಿಸಿ, ವಿಳಾಸ ಬದಲಾವಣೆ ಹಾಗೂ ವಾಹನಕ್ಕೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕೆಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಂಡಿಚೇರಿ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ವಾಹನಗಳ ಮಾಲೀಕರು ಆರ್‍ಟಿಓ ಪಾಂಡಿಚೇರಿಯಿಂದ ಎನ್‍ಓಸಿ ಪಡೆದು ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ, ನೀಡಿ ತಮ್ಮ ವಾಹನಗಳ ತೆರಿಗೆ ಭರಿಸಿ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇನ್ನು ಮುಂದೆ ಕರ್ನಾಟಕ ನೋಂದಣಿ ಸಂಖ್ಯೆ ಪಡೆದುಕೊಳ್ಳದೇ ಮತ್ತು ಕರ್ನಾಟಕ ರಾಜ್ಯ ತೆರಿಗೆ ಭರಿಸದೇ ರಸ್ತೆಯ ಮೇಲೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಮೋಟಾರ್ ವಾಹನ ನಿರೀಕ್ಷಿಕರಾದ ಪ್ರಭಾಕರ್ ಸಿ., ಸುರೇಶ ಕಾಜಗಾರ್, ಮೋಟಾರ್ ವಾಹನ ನಿರೀಕ್ಷಕರಾದ ವಿದ್ಯಾ ಸಾಗರ್, ಅನುಪಕುಮಾರ್ ಸೇರಿದಂತೆ ಅನೇಕರು ಇದ್ದರು.